ಬೆಂಗಳೂರು, ಜು 03 (DaijiworldNews/PY): ಬೆಳ್ಳಂದೂರು ಸಮೀಪದ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿದೆ. ವಾಸುದೇವ ರೆಡ್ಡಿ ಎನ್ನುವವರು ಸಲ್ಲಿಸಿದ್ದ ದೂರನ್ನು ಪರಿಗಣಿಸಿ ವಿಶೇಷ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ತಿರಸ್ಕರಿಸಿದ ನ್ಯಾಯಾಲಯ, ಯಾವುದೇ ವಿಳಂಬ ಇಲ್ಲದೇ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ಸೂಚನೆ ನೀಡಿದೆ.
ಐಟಿ ಪಾರ್ಕ್ಗೆಂದು 2000-01ರಲ್ಲಿ ಕೆಐಎಡಿಬಿ ಬೆಳ್ಳಂದೂರು, ದೇವರ ಬೀಸನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ 4.30 ಎಕರೆಯಷ್ಟು ಜಾಗವನ್ನು ಡೀನೋಟಿಫೈ ಮಾಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ಆದೇಶ ಪರಿಗಣಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶ ನೀಡಿದೆ. ಹಾಗಾಗಿ ಸಿಎಂ ಬಿಎಸ್ವೈ ಅವರ ವಿರುದ್ದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಯಲಿದ್ದು, ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.