ನವದೆಹಲಿ, ಜು 04 (DaijiworldNews/PY): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ವಿರುದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿ ದಾಖಲಾಗಿದ್ದ ಅರೋಪಗಳನ್ನು ರದ್ದುಗೊಳಿಸಿ ಹೊರಡಿಸಲಾದ ಆದೇಶ ಪರಿಗಣಿಸದೇ ಜಾಮೀನು ಅರ್ಜಿಯನ್ನು ಇತ್ಯರ್ಥಪಡಿಸುವಂತೆ ರಾಜ್ಯ ಹೈಕೋರ್ಟ್ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್ ನಾಯಕ್ ವಿರುದ್ದ ದಾಖಲಾಗಿದ್ದ ಆರೋಪಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಎ.22ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಗೌರಿ ಅವರ ಸೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದರು. ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠ ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದು, ಈ ಸೂಚನೆ ನೀಡಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಜೂನ್ 29ರಂದು ಕರ್ನಟಕ ಸರ್ಕಾರ ಹಾಗೂ ಆರೋಪಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ.
ಆದೇಶ ಪ್ರಕಟಿಸುವ ಸಂದರ್ಭ ಹಿಂದಿನ ಆರೋಪ ಪರಿಗಣಿಸದಂತೆ ಪೀಠ ಹೈಕೋರ್ಟ್ಗೆ ನಿರ್ದೇಶನ ನೀಡಿದ್ದು, ಜುಲೈ 15ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.