ಬೆಂಗಳೂರು, ಜು 04 (DaijiworldNews/PY): ಮೇಕೆದಾಟು ಕುಡಿಯುವ ನೀರು ಯೋಜನೆ ವಿಚಾರದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ.

"ತಮಿಳುನಾಡಿನ ಹಿತಾಸಕ್ತಿಗೆ, ಮೇಕೆದಾಟು ಬಳಿ ಸಮನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯಿಂದ ಯಾವುದೇ ಧಕ್ಕೆಯಾಗುವುದಿಲ್ಲ. ಹಾಗಾಗಿ, ಈ ಯೋಜನೆಗೆ ಅಡ್ಡಿಪಡಿಸಬಾರದು" ಎಂದು ಪತ್ರದಲ್ಲಿ ಸಿಎಂ ಬಿಎಸ್ವೈ ತಿಳಿಸಿದ್ದಾರೆ.
"400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು. 4.75 ಟಿಎಂಸಿ ಕುಡಿಯುವ ನೀರಿಗೆ ಅವಕಾಶ ನೀಡಿತ್ತು. ಎರಡೂ ರಾಜ್ಯಕ್ಕೂ ಇದು ಉಪಯುಕ್ತವಾಗಲಿದೆ. ತಮಿಳುನಾಡು ರೈತರಿಗೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ" ಎಂದಿದ್ದಾರೆ.
"ತಮಿಳುನಾಡು ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರದ ಮುಂದೆ ನಾವೂ ಮನವಿ ಸಲ್ಲಿಸಿದ್ದೇವೆ. ತಮಿಳುನಾಡು ಸಹ ಕಾವೇರಿ ನೀರನ್ನು ಉಪಯೋಗಿಸಿಕೊಂಡು ಪವರ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಎರಡು ರಾಜ್ಯಗಳ ಮಧ್ಯೆ ಸಾಮರಸ್ಯ ಮುಂದುವರಿಯಲಿ. ತಮಿಳುನಾಡಿನಿಂದ ಮೇಕೆದಾಟು ಯೋಜನೆಗೆ ಅಡ್ಡಿ ಬೇಡ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ರಾಜ್ಯದ ಜನಸಂಪನ್ಮೂಲ ಸಚುವ ದುರೈ ಮುರುಗನ್, "ಕರ್ನಾಟಕ ಪತ್ರ ರಾಜ್ಯ ಸರ್ಕಾರದ ಕೈ ಸೇರಿದೆ. ಸಿಎಂ ಅವರು ಶೀಘ್ರವೇ ಮೇಕೆದಾಟು ಯೋಜನೆ ಬಗ್ಗೆ ಸಭೆ ನಡೆಸಲಿದ್ದು, ಮಾತುಕತೆ ನಡೆಸಲಿದ್ದಾರೆ. ಸಿಎಂ ಸ್ಟಾಲಿನ್ ಅವರು ಕರ್ನಾಟಕದ ಪತ್ರಕ್ಕೆ ಶೀಘ್ರವೇ ಉತ್ತರಿಸಲಿದ್ದಾರೆ" ಎಂದಿದ್ದಾರೆ.