ಬೆಂಗಳೂರು, ಜು. 4 (DaijiworldNews/HR): ಕೊರೊನಾದ ಮೂರನೇ ಅಲೆಯಿಂದ ಜನರನ್ನು ರಕ್ಷಿಸಲು ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ಶೇ. 80 ಜನರಿಗೆ ಲಸಿಕೆ ಹಾಕಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಫತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಕ್ಟೋಬರ್ ತಿಂಗಳಲ್ಲಿ ಕೊರೊನಾದ ಮೂರನೇ ಅಲೆ ಹೆಚ್ಚಾಗುವ ಸೂಚನೆಯನ್ನು ತಜ್ಞರು ನೀಡಿದ್ದು, ಮೂರು ತಿಂಗಳೊಳಗೆ ಕರ್ನಾಟಕದ ಶೇಕಡ 80 ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ಹಾಕಿದರೆ ಮೂರನೇ ಅಲೆಯಿಂದ ರಕ್ಷಣೆ ಮಾಡಬಹುದಾಗಿದ್ದು,ಈ ಸವಾಲಿಗೆ ಸರ್ಕಾರ ಸಿದ್ದವಿದೆಯೇ? ಎಂದು ಪ್ರಶ್ನಿಸಿದ್ದಾರೆ
ಇನ್ನು "ಕೊರೊನಾ ವ್ಯಾಕ್ಸಿನೇಷನ್ ಬಗ್ಗೆ ಮಾತ್ರ ಮಾತನಾಡಿದರೆ ಸಾಲದು. ರಾಜ್ಯ ಸರ್ಕಾರ ಈವರೆಗೆ ಶೇಕಡ 80 ಜನರಿಗೆ ಮಾತ್ರವೇ ಲಸಿಕೆ ನೀಡಿದೆ. ಕೇವಲ ಒಂದು ಡೋಸ್ ಲಸಿಕೆ ಹಾಕಿದರೆ ಕೊರೊನಾ ತೀವ್ರತೆಯನ್ನು ತಗ್ಗಿಸಲಾಗದು. ಕೊರೊನಾದಿಂದ ಪೂರ್ಣ ರಕ್ಷಣೆ ಸಾಧ್ಯವಾಗಲು ಎರಡೂ ಡೋಸ್ ಪಡೆದಿರಬೇಕು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಶೇ.80 ವಯಸ್ಕರಿಗೆ ಎರಡೂ ಡೋಸ್ ಹಾಕುವ ಹೊಣೆಗಾರಿಕೆಯನ್ನು ಸರ್ಕಾರ ನಿರ್ವಹಿಸಲೇಬೇಕು. ಈ ಸವಾಲಿನಲ್ಲಿ ವಿಫಲವಾದರೆ, 3ನೇ ಅಲೆಯ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ" ಎಂದಿದ್ದಾರೆ.
ಬೇರೆ ದೇಶಗಳಿಗೆ ಲಸಿಕೆ ಕಳಿಸುವುದನ್ನು ಕಡಿಮೆ ಮಾಡಿ ನಮ್ಮ ದೇಶದ ಜನರಿಗೆ ವ್ಯಾಕ್ಸಿನೇಷನ್ ಮಾಡಲು ಒತ್ತು ಕೊಡಬೇಕು. ಬಿಜೆಪಿ ನಾಯಕರು ಲಸಿಕೆ ನೀಡಿಕೆಯಲ್ಲೂ ಅಪರ- ತಪರಾ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಲಸಿಕೆ ಹಾಕಿಸಿ ಜನರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು" ಎಂದು ಹೇಳಿದ್ದಾರೆ.