ಮೈಸೂರು, ಜು. 4 (DaijiworldNews/HR): ಅಮೇರಿಕಾ ಅಧ್ಯಕ್ಷರನ್ನು ಗುಜರಾತ್ಗೆ ಆಹ್ವಾನಿಸಿ ಕೊರೊನಾ ಸೋಂಕನ್ನು ಹೊರದೇಶದಿಂದ ತಂದಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ತಜ್ಞರು ವರದಿ ನೀಡಿದ್ದರೂ ಕೂಡ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡಿದರು. ತಬ್ಲಿಘಿಗಳ ಸಭೆಯಿಂದ ಕೊರೊನಾ ಆವರಿಸಿತು ಎಂದರು. ಆದರೆ ಲಕ್ಷಾಂತರ ಮಂದಿ ಸೇರಿಸಿ ಕುಂಭಮೇಳ ಮಾಡಿದ್ದು, ಕೇಂದ್ರದ ಬೇಜವಬ್ದಾರಿಯಿಂದ ಕೊರೊನಾ ಹೆಚ್ಚಾಯಿತು" ಎಂದಿದ್ದಾರೆ.
ಇನ್ನು "ಕೊರೊನಾದಿಂದ ಇಡೀ ದೇಶದಲ್ಲಿ ಮೂರುವರೆ ಲಕ್ಷ ಜನ ಸಾವನ್ನಪ್ಪಿದ್ದು, ದೇಶದ ಈ ದೊಡ್ಡ ಅನಾಹುತಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ" ಎಂದು ಆರೋಪಿಸಿದರು.
ಸರ್ವಾಧಿಕಾರಿ ಮನೋಭಾವ ಇರುವ ಪ್ರಧಾನ ಮಂತ್ರಿಯನ್ನು ನಾನೂ ಎಂದೂ ಕೂಡ ನೋಡಿಲ್ಲ ಎಂದು ಆರ್.ಧ್ರುವನಾರಾಯಣ್ ಕಿಡಿಕಾರಿದ್ದಾರೆ.