ಲಕ್ನೋ, ಜು 04 (DaijiworldNews/PY): "ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಭಾರೀ ಬಹುಮತದೊಂದಿಗೆ ಜಯ ಸಾಧಿಸಲಿದೆ" ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

"ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 75ರ ಪೈಕಿ 67ರಲ್ಲಿ ಬಿಜೆಪಿ ಜಯ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಲೋಕ ಕಲ್ಯಾಣದ ನೀತಿಗಳಿಂದ ಈ ಐತಿಹಾಸಿಕ ಗೆಲುವು ಸಿಕ್ಕಿದೆ" ಎಂದಿದ್ದಾರೆ.
"ಉತ್ತರಪ್ರದೇಶದಲ್ಲಿ ಸ್ಥಾಪಿತವಾದ ಉತ್ತಮ ಆಡಳಿತ ಹಾಗೂ ಜನರ ನಂಬಿಕೆಯ ಫಲಿತಾಂಶ ಇದಾಗಿದೆ. ರಾಜ್ಯದ ಜನತೆಗೆ ಧನ್ಯವಾದಗಳು" ಎಂದಿದ್ದಾರೆ.
ಮತದಾರರನ್ನು ಆಡಳಿತ ಪಕ್ಷವು ಅಪಹರಿಸಿದೆ ಎಂದು ಎಸ್ಪಿ ಮಾಡಿದ ಆರೋಪವನ್ನು ಆದಿತ್ಯನಾಥ್ ತಳ್ಳಿ ಹಾಕಿದ್ದು, "ಬಿಜೆಪಿ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲ ಇದಾಗಿದೆ" ಎಂದು ಹೇಳಿದ್ದಾರೆ.
"ರಾಜ್ಯ ಚುನಾವಣಾ ಆಯೋಗವು ಯುಪಿಯ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಪಕ್ಷದ ಚಿಹ್ನೆಯನ್ನು ಪ್ರಕಟಿಸಿದಿದ್ದರೂ 67 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ" ಎಂದಿದ್ದಾರೆ.