ನವದೆಹಲಿ, ಜು. 4 (DaijiworldNews/HR): ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಆ ತನಿಖೆಯನ್ನು ಜಂಟಿ ಸದನ ಸಮಿತಿಗೆ(ಜೆಪಿಸಿ) ಒಪ್ಪಿಸಬೇಕೆಂಬ ಕಾಂಗ್ರೆಸ್ ಹೇಳಿರುವ ಬೆನ್ನಲ್ಲೇ "ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಏಕೆ ಸಿದ್ಧವಿಲ್ಲ ಎಂಬುದರ ಬಗ್ಗೆ ಆನ್ಲೈನ್ ಸಮೀಕ್ಷೆ ನಡೆಸಬೇಕಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಮೋದಿ ಸರ್ಕಾರ ಜೆಪಿಸಿ ತನಿಖೆಗೆ ಏಕೆ ಸಿದ್ಧವಾಗಿಲ್ಲ? ಅಪರಾಧ ಪ್ರಜ್ಞೆ, ಸ್ನೇಹಿತರನ್ನು ರಕ್ಷಿಸುವ ಪ್ರಯತ್ನ ಇತ್ಯಾದಿ ಕಾರಣದಿಂದ ಜೆಪಿಸಿ ತನಿಖೆಗೆ ಒಪ್ಪಿಸುತ್ತಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.
ಇನ್ನು ರಫೇಲ್ ಯುದ್ಧವಿಮಾನ ಖರೀದಿಯ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಈ ಹಿಂದೆಯೂ ಆರೋಪಿಸಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಪ್ರಚಾರದ ವಿಚಾರವಾಗಿಸಿಕೊಂಡಿದ್ದರು ಎನ್ನಲಾಗಿದೆ.