ಬೆಂಗಳೂರು, ಜು. 4 (DaijiworldNews/HR): ತಮಿಳುನಾಡು ಸರ್ಕಾರವು ನೀರಿನ ವಿಷಯವಾಗಿ ಯಾವಾಗಲೂ ಕರ್ನಾಟಕದೊಂದಿಗೆ ತಕರಾರು ಮಾಡುತ್ತಲೇ ಬಂದಿದ್ದು, ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ರಾಜಕೀಯ ಸಾಹಸ ಪ್ರದರ್ಶನ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾವೇರಿ ನದಿನೀರು ಹಂಚಿಕೆ ಇರಬಹುದು, ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳೇ ಆಗಿರಬಹುದು. ಅವುಗಳ ಬಗ್ಗೆ ತಮಿಳುನಾಡು ತಕರಾರು ಮಾಡುತ್ತಲೇ ಬಂದಿದ್ದು, ಕಾವೇರಿ ನ್ಯಾಯ ಮಂಡಳಿ ರಚನೆ ಆದ ಮೇಲೆ ಅವರಿಗೆ ಕಷ್ಟವಾಗುತ್ತಿದೆ" ಎಂದರು.
"ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೂ ಅನುಕೂಲವಾಗಲಿದ್ದು, ತಮಿಳುನಾಡು ರಾಜ್ಯಕ್ಕೂ ಅನುಕೂಲ ಆಗುತ್ತದೆ. ಅವರ ಪಾಲಿನ ನೀರು ಹರಿಸಲಾಗುವುದು. ಅದಕ್ಕೆಎಲ್ಲಿಯೂ ತಡೆ ಉಂಟಾಗುವುದಿಲ್ಲ. ಹೆಚ್ಚುವರಿ ನೀರನ್ನು ಮಾತ್ರ ಕರ್ನಾಟಕ ಬಳಕೆ ಮಾಡುತ್ತದೆ. ಉಭಯ ರಾಜ್ಯಗಳಿಗೆ ಯೋಜನೆಯಿಂದ ಲಾಭವಾಗುತ್ತದೆ. ಆದರೂ ಕೂಡ ಈ ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ" ಎಂದಿದ್ದಾರೆ.
ಇನ್ನು "ಅದೇ ರೀತಿ ಮಾರ್ಕಂಡೇಯ ಯೋಜನೆಗೆ ತಮಿಳುನಾಡಿನ ತಕರಾರು ಮೊದಲಿನಿಂದಲೂ ಇದ್ದು, ಅಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ರಾಜಕೀಯ ಸಾಹಸ. ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ರಾಜಕೀಯ ಸಾಹಸ ಪ್ರದರ್ಶನ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.