ಮೈಸೂರು, ಜು 05 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓರ್ವ ಸಂಘಟನಾ ಚತುರ. ಯಾವ ರೀತಿಯಾಗಿ ಪಕ್ಷವನ್ನು ಸಂಘಟಿಸಬೇಕು ಎನ್ನುವುದನ್ನು ಅವರು ಕರಗತ ಮಾಡಿಕೊಂಡಿದ್ದಾರೆ" ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, "ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿರುವ 17 ಶಾಸಕರನ್ನು ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕೆ ಕರೆದಿದ್ದಾರೆ. ಅವರು ಪಕ್ಷಕ್ಕೆ ಕರೆದ ಕೂಡಲೇ ಯಾರೂ ಹೋಗುವುದಿಲ್ಲ. ಆದರೂ, ಅವರ ಸೌಜನ್ಯ ಮೆಚ್ಚುವಂತದ್ದು. ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜಕೀಯ ಚಲನವಲನ ಹಾಗೂ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ" ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಗೆ ಸೇರ್ಪಡೆಗೊಂಡ ಕಾಂಗ್ರೆಸ್ನ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ರಾಜಕೀಯದಲ್ಲಿ ಆ ರೀತಿಯಾದ ಮಾತು ನಡೆಯುವುದಿಲ್ಲ. ಆಯಾ ಕಾಲಕ್ಕೆ ರಾಜಕೀಯ ಪಕ್ಷಗಳ ನಡವಳಿಕೆಯಲ್ಲಿ ಬದಲಾವಣೆ ಸಹಜ ಎನ್ನುವುದನ್ನು ಸಿದ್ದರಾಮಯ್ಯ ಅವರು ತಿಳಿದುಕೊಳ್ಳುವುದು ಮುಖ್ಯ" ಎಂದು ತಿಳಿಸಿದ್ದಾರೆ.