ಲಕ್ನೋ, ಜು 12 (DaijiworldNews/PY): ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ಇಬ್ಬರು ಉಗ್ರರನ್ನು ಬಂಧಿಸಿದ ನಂತರ ಉತ್ತರಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಅಲ್ ಖೈದಾ ಸಂಘಟನೆಯಿಂದ ಬೆಂಬಲ ಪಡೆಯುತ್ತಿರುವ ಅನ್ಸರ್ ಗಝ್ವಾತುಲ್ ಹಿಂದ್ ಸಂಘಟನೆಯ ಇಬ್ಬರು ಉಗ್ರನ್ನು ಲಕ್ನೋದಲ್ಲಿ ಭಾನುವಾರ ಬಂಧಿಸಲಾಗಿತ್ತು. ಬಂಧಿತ ಉಗ್ರರನ್ನು ಮಿನ್ಹಾಜ್ ಅಹ್ಮದ್, ಮಸೀರುದ್ದೀನ್ ಎಂದು ಗುರುತಿಸಲಾಗಿದೆ.
"ಬಂಧಿತ ಇಬ್ಬರು ಉಗ್ರರು ಪ್ರೆಶರ್ ಕುಕ್ಕರ್ ಬಾಂಬ್ ತಯಾರಿಸಲು ತಯಾರಿ ನಡೆಸಿದ್ದರು. ಆಗಸ್ಟ್ 15ರ ಮೊದಲು ಮಾನವ ಬಾಂಬ್ ಮೂಲಕ ರಾಜಧಾನಿ ಲಕ್ನೋ ಸೇರಿದಂತೆ ವಿವಿಧ ನಗರಗಳಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು" ಎಂದು ಉತ್ತರಪ್ರದೇಶದ ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
"ಕೆಲ ಬಿಜೆಪಿ ನಾಯಕರ ಮೇಲೂ ಉಗ್ರರು ದಾಳಿ ನಡೆಸಲು ಮುಂದಾಗಿದ್ದರು. ಲಕ್ನೋ ಹಾಗೂ ಕಾನ್ಪುರಲ್ಲಿ ಈ ಸಂಘಟನೆಗೆ ಸೇರಿದವರಿದ್ದಾರೆ" ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
"ಉಗ್ರ ನಿಗ್ರಹ ದಳದ ಅಧಿಕಾರಿಗಳು, ಅಹ್ಮದ್ ಎಂಬಾತನ ನಿವಾಸದಿಂದ ಸ್ಫೋಟಕಗಳು ಹಾಗೂ ಪಿಸ್ತೂಲ್, ಮಸೀರುದ್ದೀನ್ನ ನಿವಾಸದಿಂದ ಸ್ಫೋಟಕಗಳು ಹಾಗೂ ಪ್ರಶರ್ ಕುಕ್ಕರ್ ಅನ್ನು ವಶಪಡಿಸಿಕೊಂಡಿದ್ದಾರೆ. ಮಿನಾಜ್ ಅಹ್ಮದ್ ಎಂಬಾತನಿಗೆ ಪಾಕಿಸ್ತಾನದ ಪೇಶಾವರ ಹಾಗೂ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಭಾಗದ ನಗರ ಕ್ವೆಟ್ಟಾದಿಂದ ಸೂಚನೆಗಳು ರವಾನೆಯಾಗುತ್ತಿದ್ದವು" ಎಂದು ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಈ ಘಟನೆಯ ನಂತರ ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಾರಬಂಕಿ ಸೇರಿದಂತೆ ಹರ್ದೋಯ್, ಉನ್ನಾವ್, ಸೀತಾಪುರ, ರಾಯ್ ಬರೇಲಿ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಯುಪಿ ಭಯೋತ್ಪಾದನಾ ನಿಗ್ರಹ ದಳ, ಲಕ್ನೋದಲ್ಲಿ ಎರಡು ವಿಳಾಸಗಳ ಮೇಲೆ ದಾಳಿ ನಡೆಸಿದ್ದು, ಭಾನುವಾರ ಇಬ್ಬರನ್ನು ಬಂಧಿಸಿದ್ದರು. ಆ ವಿಳಾಸಗಳಲ್ಲಿದ್ದ ಏಳು ಮಂದಿಯ ಪೈಕಿ ಐವರು ಸ್ಥಳದಿಂದ ಪರಾರಿಯಾಗಿದ್ದಾರೆ. ಲಕ್ನೋ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಶಂಕಿತರನ್ನು ಬಂಧಿಸುವ ಪ್ರಯತ್ನದಲ್ಲಿ ಈ ಭದ್ರತಾ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.