ನವದೆಹಲಿ, ಜು. 12 (DaijiworldNews/HR): ಸಂಸತ್ತಿನ ಮಾನ್ಸೂನ್ ಅಧಿವೇಶನ ಜುಲೈ 19 ರಿಂದ ಪ್ರಾರಂಭವಾಗಲಿದ್ದು,ಕೊರೊನಾ ಸಂಬಂಧಿತ ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, "ಕೊರೊನಾ ಲಸಿಕೆ ಪಡೆಯದವರು ಅಧಿವೇಶನದಲ್ಲಿ ಸಂಸತ್ತಿನ ಆವರಣಕ್ಕೆ ಪ್ರವೇಶಿಸುವ ಮೊದಲು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. 323 ಸಂಸದರಿಗೆ ಸಂಪೂರ್ಣ ಲಸಿಕೆ ನೀಡಲಾಗಿದ್ದು, 23 ಮಂದಿ ಕೆಲವು ವೈದ್ಯಕೀಯ ಕಾರಣಗಳಿಂದಾಗಿ ತಮ್ಮ ಮೊದಲ ಡೋಸ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ" ಎಂದರು.
ಇನ್ನು ಉಭಯ ಸದನಗಳು ಏಕಕಾಲದಲ್ಲಿ ನಡೆಯಲಿದ್ದು, ಬೆಳಿಗ್ಗೆ 11 ರಿಂದ ಕಲಾಪ ಆರಂಭವಾಗಲಿದ್ದು, ಸಂಸತ್ತಿನ ಮಾನ್ಸೂನ್ ಅಧಿವೇಶನ ಜುಲೈ 19 ರಿಂದ ಪ್ರಾರಂಭವಾಗಿ ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ.
ಕೊರೊನಾ ಪ್ರಾರಂಭವಾದಾಗಿನಿಂದ, ಸಂಸತ್ತಿನ ಮೂರು ಅಧಿವೇಶನಗಳನ್ನು ಮೊಟಕುಗೊಳಿಸಲಾಗಿದ್ದು, ಕಳೆದ ವರ್ಷ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಗಿತ್ತು.