ಬೆಂಗಳೂರು, ಜು 19 (DaijiworldNews/MS): ಸಿಎಂ ಬದಲಾವಣೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ. ಎಸ್ ಈಶ್ವರಪ್ಪ , "ಯಾರೋ ಹುಚ್ಚರು ಮಾಡಿರುವ ಆಡಿಯೋಗಾಗಿ ನಳಿನ್ ಅವರನ್ನು ಬಲಿಪಶು ಮಾಡಬೇಡಿ, ಆಡಿಯೋ ನನ್ನದಲ್ಲ ಎಂದು ನಳಿನ್ ಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ" ಎಂದು ಹೇಳಿದ್ದಾರೆ.

ಕಿಡಿಗೇಡಿಗಳು ಯಾರೋ ಆಡಿಯೋವನ್ನು ಸೃಷ್ಟಿ ಮಾಡಿ ವೈರಲ್ ಮಾಡಿದ್ದಾರೆ. ಅಲ್ಲದೆ ನಳಿನ್ ಅವರು ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದು ನನಗನಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿದ್ದರೆ ರಾಜ್ಯದಲ್ಲಿ ಈ ರೀತಿಯ ಗೊಂದಲಗಳು ಉದ್ಬವಿಸುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವುದು ಖಂಡಿತಾ ಎಂದು ಆಶಾವಾದ ವ್ಯಕ್ತಪಡಿಸಿದ ಅವರುಮಂತ್ರಿ ಸ್ಥಾನ ಹೋದರೆ ಹೋಗಲಿ. ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ. ಮಂತ್ರಿ ಸ್ಥಾನ ಇಲ್ಲಾಂದರೆ ಸಂಘಟನೆಯ ಕೆಲಸ ಮಾಡ್ತೀನಿ. ಸಂಘಟನೆಯ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೀನಿ. ನಾನು ಮಂತ್ರಿಸ್ಥಾನ ತ್ಯಾಗಕ್ಕೆ ರೆಡಿ ಎಂಬುದಾಗಿ ಇದೇ ವೇಳೆ ಸ್ಪಷ್ಟಪಡಿಸಿದರು.