ಬೆಂಗಳೂರು, ಜು 26 (DaijiworldNews/PY): ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವ ಬಿ. ಎಸ್.ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಯಡಿಯೂರಪ್ಪ ಕಾರಿನಲ್ಲಿ ತೆರಳಿದ್ದು, ನೇರವಾಗಿ ರಾಜಭವನಕ್ಕೆ ಬಂದು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
ರಾಜೀನಾಮೆ ಸ್ವೀಕರಿಸಿದ ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದು, ಹಂಗಾಮಿ ಸಿಎಂ ಆಗಿರುವಂತೆ ಸೂಚನೆ ನೀಡಿದ್ದಾರೆ.
ಸರ್ಕಾರದ ಸಾಧನ ಸಮಾವೇಶದಲ್ಲಿ ಗದ್ಗಿತರಾಗಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, "ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದುಃಖದಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ಸಂತೋಷದಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದಿದ್ಧಾರೆ.