ದೇವನಹಳ್ಳಿ, ಜು 26 (DaijiworldNews/PY): "ರಾಜಕೀಯಕ್ಕೆ ಧರ್ಮ ಲೇಪನವಾಗಬಾರದು. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಎಲ್ಲಾ ಧರ್ಮೀಯರೂ ಇರುತ್ತಾರೆ" ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಧರ್ಮವೇ ಬೇರೆ, ರಾಜಕೀಯವೇ ಬೇರೆ ಈ ವಿಚಾರವನ್ನು ಮಠಾಧೀಶರು ಅರ್ಥ ಮಾಡಿಕೊಳ್ಳುವುದು ಮುಖ್ಯ. ಮಠಾಧೀಶರು ಪರೋಕ್ಷವಾಗಿ ರಾಜಕಾರಣಕ್ಕೆ ಪ್ರವೇಶಿಸಬಾರದು" ಎಂದಿದ್ದಾರೆ.
"ಕಾಂಗ್ರೆಸ್ ಸೇರಿದಂತೆ ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್ ಹೀಗೆ ಎಲ್ಲಾ ಪಕ್ಷಗಳಲ್ಲಿ ಎಲ್ಲಾ ಧರ್ಮಗಳ ಜನರು ಇರುತ್ತಾರೆ. ಮಠಾಧೀಶರು ಒಂದು ಧರ್ಮದ ಪರ ನಿಲ್ಲುವುದು ಸರಿಯಲ್ಲ" ಎಂದು ಹೇಳಿದ್ದಾರೆ.
"ಬಿಜೆಪಿಯಲ್ಲಿ ದಲಿತರನ್ನು ಸಿಎಂ ಮಾಡುವ ವಿಚಾರ ಅವರಿಗೆ ಬಿಟ್ಟಿದ್ದು, ನಾನು ಬೇರೆ ಪಕ್ಷಕ್ಕೆ ಸಂಬಂಧಿಸಿದಂತೆ ಮಾತನಾಡುವುದಿಲ್ಲ. ದಲಿತರಿಗೆ ಸಿಎಂ ಸ್ಥಾನ ನೀಡಿ ಎಂದು ಅವರ ಬಳಿ ಭಿಕ್ಷೆ ಬೇಡಲು ಆಗುವುದಿಲ್ಲ. ಯಾರನ್ನು ಸಿಎಂ ಮಾಡಬೇಕು ಎನ್ನುವ ಬಗ್ಗೆ ಆ ಪಕ್ಷ ತೀರ್ಮಾನಿಸಲಿ" ಎಂದಿದ್ದಾರೆ.
"ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಅತಿವೃಷ್ಟಿಯಾಗಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಏನು ಸಹಾಯ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ ಚಿಂತನೆ ನಡೆಸಿ, ಸ್ಪಂದಿಸಲಿ" ಎಂದು ತಿಳಿಸಿದ್ದಾರೆ.