ಬೆಂಗಳೂರು, ಆ 21 (DaijiworldNews/PY): ಧಾರವಾಡ ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿನಯ್ ಕುಲಕರ್ಣಿ ಅವರು ಜೈಲಿನಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ತಿನ್ನಿಸಿ ಸ್ವಾಗತ ಕೋರಿದ್ದು, ಇದಕ್ಕೆ ರಾಜ್ಯ ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಕಾಂಗ್ರೆಸ್ ಪಕ್ಷ ನೈತಿಕವಾಗಿ ಅಧಃಪತನ ಕಂಡಿದೆ ಎಂಬುದನ್ನು ಸೂಚಿಸಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೊಲೆ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೆ ಯುದ್ಧ ಗೆದ್ದು ಬಂದವರಂತೆ ಸ್ವಾಗತಿಸಲಾಗುತ್ತಿದೆ. ಕೊಲೆ ಆರೋಪಿಗಳಿಗೆ ಭವ್ಯ ಸ್ವಾಗತ ನೀಡುವುದನ್ನು ಕಾಂಗ್ರೆಸ್ ವರಿಷ್ಠರು ಬೆಂಬಲಿಸುತ್ತಾರೆಯೇ?" ಎಂದು ಪ್ರಶ್ನಿಸಿದೆ.
"ವಿವಾದಾತ್ಮಕತೆಯೇ ನಾಯಕತ್ವದ ಗುಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಬೆನ್ನು ತಟ್ಟಿಕೊಂಡ ಮೇಲೆ ವಿನಯ್ ಕುಲಕರ್ಣಿ ಅವರಂಥಹ ಕೊಲೆ ಆರೋಪಿಗೆ ಭವ್ಯ ಸ್ವಾಗತ ಸಿಗುವುದರಲ್ಲಿ ಹೆಚ್ಚುಗಾರಿಕೆ ಇಲ್ಲ. ತಿಹಾರ್, ಹಿಂಡಲಗಾ ಜೈಲಿನಿಂದ ಹೊರಬಂದವರೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಠರು!!!" ಎಂದು ಟೀಕೆ ಮಾಡಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಸಂದರ್ಭ ಅಭಿಮಾನಿಗಳು ಸೇಬು ಹಾರ ಹಾಕಿ ಅದ್ದೂರಿಯಿಂದ ಬರಮಾಡಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜೈಲಿನ ಹೊರ ಭಾಗದಲ್ಲಿ ಕಾಯುತ್ತಾ ನಿಂತಿದ್ದು, ವಿನಯ್ ಅವರು ಹೊರಬರುತ್ತಿದ್ದಂತೆ ವಿನಯ್ ಅವರಿಗೆ ರಾಖಿ ಕಟ್ಟಿ ಅಣ್ಣನನ್ನು ಸ್ವಾಗತಿಸಿ ರಕ್ಷಾ ಬಂಧನ ಆಚರಿಸಿದ್ದಾರೆ.