ನವದೆಹಲಿ, ಆ.31 (DaijiworldNews/HR): ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾದ 9 ಮಂದಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನಿಸಿಕೊಂಡ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು, ಹಾಲಿ ಸಿಜೆಐ ಎನ್. ವಿ ರಮಣ ಅವರು ನೂತನ ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾ. ಬಿ.ವಿ ನಾಗರತ್ನ ಅವರು ಸಿಜೆಐಯಾಗಿ ಅಲ್ಪಾವಧಿ ಹುದ್ದೆಯಲ್ಲಿರಲಿದ್ದು, ಈ ಮೂಲಕ ತಂದೆ ಹಾಗೂ ಮಗಳಿಬ್ಬರೂ ಸಿಜೆಐ ಆದ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ.
ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯ ಅವರ ಪುತ್ರಿಯಾದ ನಾಗರತ್ನ ಅವರು 1987ರ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದ್ದು, 18 ಫೆಬ್ರವರಿ 2008 ರಂದು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿರಾಗಿ ನೇಮಕಗೊಂಡರು. 2010ರ ಫೆಬ್ರವರಿ 17ರಂದು ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಯಿತು.