ಮೈಸೂರು, ಸೆ. 01 (DaijiworldNews/PY): "ಹಣದ ಮೇಲೆ ರಾಜಕಾರಣ ಮಾಡುವುದೇ ಜೆಡಿಎಸ್ ಸಂಸ್ಕೃತಿ. ಜೆಡಿಎಸ್ ಪಕ್ಷದ ಪರಿಸ್ಥಿತಿ ಏನೆಂದು ಇಡೀ ರಾಜ್ಯದ ಜನರಿಗೆ ತಿಳಿದಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಬಗ್ಗೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಅವರು, "ಕುಮಾರಸ್ವಾಮಿ ಅವರು ತಮ್ಮ ಅನುಭವವನ್ನು ತಿಳಿಸಿದ್ದಾರೆ. ಜೆಡಿಎಸ್ ಪಕ್ಷದ ಪರಿಸ್ಥಿತಿ ಏನೆಂದು ಇಡೀ ರಾಜ್ಯದ ಜನರಿಗೆ ತಿಳಿದಿದೆ. ರಾಜ್ಯ, ದೇಶ ಆಳಿದ ಇವರ ನಾಲಿಗೆ ಸರಿಯಾಗಿ ಇರುತ್ತಿದ್ದರೆ ಜೆಡಿಎಸ್ಗೆ ಈ ರೀತಿಯಾದ ಪರಿಸ್ಥಿತಿ ಬರುತ್ತಿರಲಿಲ್ಲ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ" ಎಂದಿದ್ದಾರೆ.
ಬೆಲೆ ಏರಿಕೆ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಯುಪಿಎ ಕಾಲಘಟ್ಟಕ್ಕೆ ಹಾಗೂ ಈಗಿನ ಪರಿಸ್ಥಿತಿಗೆ ಹೋಲಿಕೆ ಮಾಡಿನೋಡಬೇಕು. ನಮ್ಮ ಸರ್ಕಾರವು ಬೆಲೆ ಏರಿಕೆ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಏರುಪೇರಿನ ಕಾರಣ ವ್ಯತ್ಯಾಸ ಉಂಟಾಗುತ್ತಿದೆ" ಎಂದು ಹೇಳಿದ್ದಾರೆ.