ನವದೆಹಲಿ, ಸೆ 2 (DaijiworldNews/MS): ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಪೋರ್ಟಲ್ಗಳಲ್ಲಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಕೆಲವು ಚಾನೆಲ್ಗಳಲ್ಲಿ ತೋರಿಸಲಾದ ಸುದ್ದಿಗಳು ಕೋಮುವಾದದ ಧ್ವನಿಯನ್ನು ಹೊಂದಿವೆ, ಇದು ದೇಶಕ್ಕೆ ಕೆಟ್ಟ ಹೆಸರು ತರಬಹುದು ಎಂದು ಕೋರ್ಟ್ ಎಚ್ಚರಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠವು ಜಾಮೀಯತ್ ಉಲೇಮಾ-ಇ-ಹಿಂದ್ ಹಾಗೂ ಇತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಅರ್ಜಿಯಲ್ಲಿ ಮರ್ಕಜ್ ನಿಜಾಮುದ್ದೀನ್ ನ ಧಾರ್ಮಿಕ ಸಮ್ಮೇಳನದ ನಕಲಿ ಸುದ್ದಿಗಳ ಪ್ರಸಾರವನ್ನು ನಿಲ್ಲಿಸಲು ಮತ್ತು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.
"ಖಾಸಗಿ ಸುದ್ದಿ ವಾಹಿನಿಗಳ ವಿಭಾಗದಲ್ಲಿ ತೋರಿಸಿರುವ ಪ್ರತಿಯೊಂದೂ ಕೋಮುವಾದಿ ದ್ವನಿಯನ್ನು ಹೊಂದಿದೆ. ಅಂತಿಮವಾಗಿ, ಈ ದೇಶಕ್ಕೆ ಕೆಟ್ಟ ಹೆಸರು ಪಡೆಯುವಂತಾಗುತ್ತದೆ. ಈ ಖಾಸಗಿ ಚಾನೆಲ್ಗಳನ್ನು ನಿಯಂತ್ರಿಸಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ" ಎಂದು ಪೀಠ ಪ್ರಶ್ನಿಸಿದೆ.
"ಸಾಮಾಜಿಕ ಜಾಲತಾಣ ಪ್ರಬಲ ಧ್ವನಿಗಳನ್ನು ಮಾತ್ರ ಆಲಿಸುತ್ತವೆ. ನ್ಯಾಯಾಧೀಶರ ವಿರುದ್ಧ, ಸಂಸ್ಥೆಯ ವಿರುದ್ಧ ಯಾವುದೇ ಹೊಣೆಗಾರಿಕೆ ಇಲ್ಲದೇ ಹಲವಾರು ವಿಷಯಗಳನ್ನು ಬರೆಯಲಾಗುತ್ತದೆ" ಎಂದು ನ್ಯಾ. ಸೂರ್ಯಕಾಂತ್ ಹಾಗೂ ಎಎಸ್ ಬೋಪಣ್ಣ ಅವರಿದ್ದ ಪೀಠ ಹೇಳಿದೆ.
"ವೆಬ್ ಪೋರ್ಟಲ್ಗಳು ಮತ್ತು ಯೂಟ್ಯೂಬ್ ಚಾನೆಲ್ಗಳಲ್ಲಿ ನಕಲಿ ಸುದ್ದಿ ಮತ್ತು ಅಪಪ್ರಚಾರದ ಮೇಲೆ ಯಾವುದೇ ನಿಯಂತ್ರಣವಿಲ್ಲ. ನೀವು ಯೂಟ್ಯೂಬ್ಗೆ ಹೋದರೆ, ನಕಲಿ ಸುದ್ದಿಗಳು ಹೇಗೆ ಮುಕ್ತವಾಗಿ ಪ್ರಸಾರವಾಗುತ್ತವೆ ಎಂಬುದನ್ನು ಕಂಡುಕೊಳ್ಳಬಹುದು ಮತ್ತು ಯಾರು ಬೇಕಾದರೂ ಯೂಟ್ಯೂಬ್ನಲ್ಲಿ ಚಾನೆಲ್ ಆರಂಭಿಸಬಹುದು" ಎಂದು ಪೀಠ ಅಸಮಧಾನ ವ್ಯಕ್ತಪಡಿಸಿತು.
ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಪೋರ್ಟಲ್ಗಳನ್ನು ಒಳಗೊಂಡಂತೆ ಆನ್ಲೈನ್ ವಿಷಯವನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸದಾಗಿ ಜಾರಿಗೆ ತಂದಿರುವ ಐಟಿ ನಿಯಮಗಳ ಕುರಿತು ವಿವಿಧ ಹೈಕೋರ್ಟ್ಗಳಿಂದ ಅರ್ಜಿಗಳನ್ನು ತನಗೆ ವರ್ಗಾಯಿಸಬೇಕೆಂಬ ಕೇಂದ್ರದ ಮನವಿಯನ್ನು ಆರು ವಾರಗಳ ನಂತರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು.