ದಾವಣಗೆರೆ, ಸ. 02 (DaijiworldNews/HR): "ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿತ್ತು. ಅವರು ಸ್ವಯಂ ಆಗಿ ಬೊಮ್ಮಾಯಿ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದೆ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಶ್ವವನ್ನೇ ಕಾಡಿದ ಕೊರೊನಾವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಬಡವರು, ಅಲೆಮಾರಿಗಳು, ದಲಿತರು, ಆದಿವಾಸಿಗಳ ಸಹಿತ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲರ ನೆರವಿಗೆ ಸರ್ಕಾರ ಬಂದಿದೆ" ಎಂದರು.
ಇನ್ನು "ಮಾನವ ಕುಲಕ್ಕೆ ಸವಾಲಾಗಿರುವ ಕೊರೊನಾವನ್ನು 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಹೇಗೆ ಎದುರಿಸಲಿದೆ ಎಂದು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿತ್ತು. ಆದರೆ ಪ್ರಧಾನಿ ಮೋದಿ ಅವರು ಕೊರೊನಾ ಪ್ರಾರಂಭದ ದಿನದಿಂದ ನಡೆಸಿದ ಪ್ರಯತ್ನಕ್ಕೆ ದೇಶದ ಎಲ್ಲ ರಾಜ್ಯಗಳು, ಹಾಗೂ ಜನರು ಹೆಗಲಿಗೆ ಹೆಗಲು ನೀಡಿದ ಪರಿಣಾಮ ಕೋವಿಡ್ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ" ಎಂದು ಹೇಳಿದ್ದಾರೆ.