ನವದೆಹಲಿ, ಸೆ. 02 (DaijiworldNews/SM): ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ. ಕಳೆದ ಹತ್ತು ದಿನಗಳಲ್ಲಿ ನಿಗೂಢ ಜ್ವರದ ಕಾರಣದಿಂದಾಗಿ ಸುಮಾರು ಮೂವತ್ತಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆರೋಗ್ಯ ಸಚಿವಾಲಯದ ರೋಗ ನಿಯಂತ್ರಣ ಕೇಂದ್ರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದೆ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಪ್ರಸ್ತುತ ಈ ಜ್ವರ ಉಲ್ಬಣಗೊಳ್ಳುತ್ತಿದೆ. ಜ್ವರ, ದೇಹದ ನೋವು, ತಲೆನೋವು, ನಿರ್ಜಲೀಕರಣ, ಪ್ಲೇಟ್ಲೆಟ್ ಎಣಿಕೆಯಲ್ಲಿ ಕ್ಷಿಪ್ರ ಇಳಿಕೆ, ಹೊಟ್ಟೆ ನೋವು ಮತ್ತು ಕೆಲವು ಸಂದರ್ಭಗಳಲ್ಲಿ ಡೆಂಗ್ಯೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವೈರಲ್ ಜ್ವರ ಎಂದು ಪರಿಗಣಿಸಲಾಗಿದೆ.
ಸದ್ಯ ಮೃತಪಟ್ಟಿರುವ ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿಲ್ಲ. ಕೆಲವು ಮಕ್ಕಳಲ್ಲಿ ಡೆಂಗ್ಯೂ ಪಾಸಿಟಿವ್ ಕಾಣಿಸಿಕೊಂಡಿದೆ. ಆದರೆ, ಏಕಾಏಕಿ ಕಾಣಿಸಿಕೊಂಡಿರುವ ನಿಗೂಢ ಜ್ವರದ ಕಾರಣದಿಂದಾಗಿ ಹಲವು ಮಕ್ಕಳು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನತೆ ಆತಂಕಕ್ಕೀಡಾಗಿದ್ದಾರೆ.