ನವದೆಹಲಿ, ಸೆ.15 (DaijiworldNews/PY): "ವಿಶ್ವದಲ್ಲೇ ಹಿಂದೂಗಳು ಹೆಚ್ಚು ಸಹಿಷ್ಣುತೆ ಹೊಂದಿರುವ ಬಹುಸಂಖ್ಯಾತರು" ಎಂದು ಬಾಲಿವುಡ್ನ ಹಿರಿಯ ಗೀತ ರಚನೆಕಾರ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಅಖ್ತರ್ ಬರೆದಿರುವ ಲೇಖನದಲ್ಲಿ, "ಎಂದಿಗೂ ಭಾರತ ಅಫ್ಗಾನಿಸ್ತಾನದಂತೆ ಆಗಲು ಸಾಧ್ಯವಿಲ್ಲ. ಭಾರತೀಯರ ಸ್ವಭಾವ ಉಗ್ರವಾದವಲ್ಲ. ಅವರು ಎಂದಿಗೂ ಅತೀರೇಕದಿಂದ ವರ್ತಿಸುವುದಿಲ್ಲ" ಎಂದಿದ್ದಾರೆ.
"ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ವಿಶ್ವದಲ್ಲೇ ಹಿಂದೂಗಳು ತುಂಬಾ ಒಳ್ಳೆಯವರು ಹಾಗೂ ಸಹಿಷ್ಣುತೆಯುಳ್ಳ ಬಹುಸಂಖ್ಯಾತರು ಎಂದು ಹೇಳಿದ್ದೆ. ನಾನು ಈಗಲೂ ಆ ಮಾತನ್ನು ಪುನರಾವರ್ತಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
ಜಾವೇದ್ ಅಖ್ತರ್ ಅವರು ಇತ್ತೀಚೆಗೆ ಬಜರಂಗದಳ ಹಾಗೂ ಆರ್ಎಸ್ಎಸ್ ಅನ್ನು ತಾಲಿಬಾನಿಗಳಿಗೆ ಸಮಾನ ಎಂದಿದ್ದರು. ಇವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.