ಮೈಸೂರು, ಸ. 18 (DaijiworldNews/HR): ಬಿಜೆಪಿಯವರು ಧರ್ಮ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದು, ಕಲ್ಪನೆ ಆಧಾರಿತ ವಿದ್ಯೆ ಕಲಿಸಲು ಮುಂದಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಸ್ತೂರಿ ರಂಗನ್ ಸಮತಿಯ ಬಹುತೇಕರು ಆರ್ಎಸ್ಎಸ್ನವರು. ಭಾರತದ ವಿವಿಧತೆಗೆ ಧ್ವನಿಯಾಗಬಲ್ಲ ಸದಸ್ಯರ ನೇಮಕವಾಗಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಬಹುತ್ವದ ಚಿಂತನೆಗಳಿಲ್ಲ" ಎಂದಿದ್ದಾರೆ.
ಇನ್ನು "ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಕೈಬಿಡಲಾಗಿದ್ದು, ಬದಲಿಗೆ 12ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನ ಕುಲಕಸುಬುಗಳಿಗೆ ಮರಳಿಸುವ ಷಡ್ಯಂತ್ರ" ಎಮ್ದು ಆರೋಪಿಸಿದ್ದಾರೆ.
"ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಪ್ರಾಚೀನ ಸಂಸ್ಕೃತಿಗೆ, ಸಂಸ್ಕೃತ ಭಾಷೆ ಕಲಿಕೆಗೆ ಅನಗತ್ಯವಾಗಿ ಒತ್ತುನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.