ಬೆಂಗಳೂರು, ಸೆ 29 (DaijiworldNews/MS): ಆರೆಸ್ಸೆಸ್ ಸಂಘಟನೆ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿಕೊಡುವ ಕಾರ್ಖಾನೆಯೇ ಎಂದು ಪ್ರಶ್ನಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಖಡಕ್ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ಸಿ.ಟಿ ರವಿ ಬಿಜೆಪಿ ಮತ್ತು ಆರ್ಎಸ್ಎಸ್ಗೂ ನಡುವೆ ಇರುವಂತಹ ಸಂಬಂಧ "ತಾಯಿ ಮತ್ತು ಮಕ್ಕಳ ಸಂಬಂಧ" ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿ.ಟಿ ರವಿ " ಬಿಜೆಪಿ ಮತ್ತು ಆರ್ಎಸ್ಎಸ್ಗೂ ಏನು ಸಂಬಂಧ ಎಂದು ಕೇಳಿದ್ದೀರಲ್ಲವೇ?ತಾಯಿ ಮತ್ತು ಮಕ್ಕಳ ಸಂಬಂಧ. ಅದು ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು ಮತ್ತು ಗಟ್ಟಿಯಾಗಿ ಭಾರತವನ್ನು ಕಟ್ಟಲು ಕಾರ್ಯಕರ್ತರನ್ನು ರೂಪಿಸುವ ಶಿಸ್ತುಬದ್ಧ ಗರಡಿ ಮನೆ" ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಸಂಘ ಪರಿಹಾರಕ್ಕೆ ಬರುವಂತೆ ಮುಕ್ತಾ ಆಹ್ವಾನ ನೀಡಿದ ಅವರು, " ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ’ಅಂಧ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆʼ ಆಗುತ್ತದೆ. ಹೀಗಾಗಿ ನೀವು ಸಂಘದ ಶಾಖೆಗೆ ಬನ್ನಿ ಸಂಘದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ ಎಂದು ಹೇಳಿದ್ದಾರೆ.
ಸೆ.೨೮ ರ ಮಂಗಳವಾರ ಸಿದ್ದರಾಮಯ್ಯ " ಆರ್ ಎಸ್ ಎಸ್ ಎಂದರೆ ಏನು? ಅದರ ಜೊತೆ ಬಿಜೆಪಿ ಪಕ್ಷಕ್ಕೆ ಸಂಬಂಧ ಏನು?ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನುಉತ್ಪಾದಿಸಿ ಕೊಡುವ ಕಾರ್ಖಾನೆಯೇ? .ಆರೆಸ್ಸೆಸ್ ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬೇರೆ ಪಕ್ಷದವರು ಹಿಂದೂಗಳಲ್ಲವೇ?ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು ಆರೆಸ್ಸೆಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು? ಆರ್ ಎಸ್ ಎಸ್ ನಾಯಕರೇನು ಜನರಿಂದ ಚುನಾಯಿತರಾದ ನಾಯಕರೇ? ಅವರು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು? ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು? ಎಂದು ಟ್ವೀಟ್ ಮಾಡಿ ಸಿಟಿ ರವಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು