ಲಕ್ನೋ, ಸೆ.29 (DaijiworldNews/PY): ಇತ್ತೀಚೆಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದ ಪ್ರತಿಮೆಯೊಂದರ ಫಲಕದ ಮೇಲಿದ್ದ ಅವರ ಹೆಸರಿಗೆ ಕಪ್ಪು ಬಣ್ಣ ಬಳಿದಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 150 ಜನರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.

ದಾದ್ರಿಯ ಖಾಸಗಿ ಕಾಲೇಜೊಂದರಲ್ಲಿ 9ನೇ ಶತಮಾನದ ರಾಜ ಮಿಹಿರ್ ಭೋಜ್ನ 15 ಅಡಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸೆ.22ರಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಮೆಯನ್ನು ಉದ್ಘಾಟಿಸಿದ್ದರು. ಆದರೆ, ಪ್ರತಿಮೆಯ ಕೆಳಗಿದ್ದ ರಾಜನ ಹೆಸರ ಮುಂದೆ ಬರೆದಿದ್ದ ಗುರ್ಜಾರ್ ಎನ್ನುವ ಶಬ್ದವನ್ನು ತೆಗೆಯಲಾಗಿತ್ತು. ಈ ಕುರಿತು ಗುರ್ಜಾರ್ ಸಮುದಾಯದ ಮಂದಿ ಆವೇಶಕ್ಕೊಳಗಾಗಿ ಬಿಜೆಪಿ ಸರ್ಕಾರದ ವಿರುದ್ದ ಮಹಾಪಂಚಾಯತ್ ನಡೆಸಿದ್ದರು ಎನ್ನಲಾಗಿದೆ.
"ಮಂಗಳವಾರದಂದು ಹಲವಾರು ಮಂದಿ ಗುಂಪಾಗಿ ಬಂದು ಫಲಕದ ಮೇಲಿದ್ದ ಸಿಎಂ ಹೆಸರಿನ ಮೇಲೆ ಕಪ್ಪು ಪೈಂಟ್ ಬಳಿದು ಹೋದರು ಎನ್ನುವ ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ. ಬಹುತೇಕ ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ" ಎಂದು ದಾದ್ರಿ ಠಾಣಾಧಿಕಾರಿ ಪ್ರದೀಪ್ ತ್ರಿಪಾಠಿ ಹೇಳಿದ್ದಾರೆ.