ಮುಂಬೈ, ಅ.04 (DaijiworldNews/HR): ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಬೆನ್ನಲ್ಲೆ ಶಾರುಖ್ ಅವರು "ನನ್ನ ಮಗ ಡ್ರಗ್ಸ್ ಸೇವನೆ ಮಾಡಲಿ" ಎಂದು ಮಾತನಾಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ.

ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದೆ.
ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಪಾಲ್ಗೊಂಡಿದ್ದ ಸಂದರ್ಶನವೊಂದರಲ್ಲಿ ತಮ್ಮ ಪುತ್ರನ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ್ದು, "ತಮ್ಮ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಸೇವಿಸಲಿ, ಮನಬಂದಷ್ಟು ಸಿಗರೇಟ್ ಸೇದಲಿ, ಬೇಕಾದರೆ ಹುಡುಗಿಯರ ಹಿಂದೆಯೂ ಹೋಗಲಿ. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್ ಎಂಜಾಯ್ ಮಾಡಲಿ" ಎಂದು ಹೇಳಿದ್ದರು.
ಇನ್ನು 1997ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೊತೆಯಾಗಿ ನೀಡಿದ್ದ ಸಂದರ್ಶನ ಇದಾಗಿದ್ದು, ಶಾರುಖ್ ಅವರ ಈ ಹಳೆಯ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದೆ.