ತಿರುವನಂತಪುರಂ, ಅ.11 (DaijiworldNews/PY): ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಲನಚಿತ್ರ ನಟ ನಡುಮುಡಿ ವೇಣು (73) ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹೊಟ್ಟೆಗೆ ಸಂಬಂಧಿಸಿದ ಕಾಯಿಕೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ನಿಧನರಾಗಿದ್ದಾರೆ.
ನಡುಮುಡಿ ವೇಣು ಅವರು ನಾಟಕ ಹಾಗೂ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ನಾಯಕ, ಖಳನಾಯಕನಾಗಿ ನಟಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿರುವ ವೇಣು ಅವರು ಚಿತ್ರಕಥೆಗಳನ್ನು ಕೂಡಾ ಬರೆದಿದ್ದಾರೆ.
ವೇಣು ಅವರು ಅರವಿಂದನ್, ಪದ್ಮರಾಜನ್, ಭರತನ್ ಮತ್ತು ಜಾನ್ ಅಬ್ರಹಾಂ ಮೊದಲಾದವರ ಸ್ನೇಹ ಸಂಪಾದಿಸಿದ್ದು, 1978ರಲ್ಲಿ ಅರವಿಂದನ್ ಅವರ ‘ತಂಬಿ’ ಸಿನಿಮಾ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭರತನ್ ಅವರ ಆರವಂ ಹಾಗೂ ತಕರ ಸಿನಿಮಾದಲ್ಲಿ ವೇಣು ಅವರ ನಟನೆ ಗಮನಿಸಲ್ಪಟ್ಟಿತ್ತು. ತಿರುವನಂತಪುರ ದೂರದರ್ಶನದ ಪ್ರಾರಂಭದ ದಿನಗಳಲ್ಲಿ ವೇಣು ಅವರು ಹಲವು ಧಾರವಾಹಿಗಳಲ್ಲಿ ನಟಿಸಿದ್ದರು.
ಇವರು, ವಿಡ ಪರಯುಂ ಮುಂಬೇ, ಗುರೂಜಿ ಒರು ವಾಕ್, ಚಾಮರಂ, ಯವನಿಕಾ, ಕಳ್ಳ ಪಲಿತ್ರನ್, ಪಂಚವಡಿಪ್ಪಾಲಂ, ಒರಿಡತ್ತೊರು ಫೈಲ್ಮ್ಯಾನ್, ಅಚ್ಚುವೇಟ್ಟನ್ಡೆ ವೀಡ್, ಹಿಸ್ ಹೈನೆಸ್ ಅಬ್ದುಲ್ಲಾ, ಎನಿಕ್ಕು ವಿಷಕುನ್ನು, ಅಪ್ಪುಣ್ಮಿ, ಭರತಂ, ಸೈರಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.