ಹೊಸದುರ್ಗ, ಅ.11 (DaijiworldNews/PY): "ಆರ್ಎಸ್ಎಸ್ ಕುರಿತು ಮಾತು ಬೆಂಕಿಯೊಂದಿಗೆ ಸರಸವಾಡಿದಂತೆ" ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೆಹರು ಹಾಗೂ ಇಂದಿರಾ ಗಾಂಧಿ ಅವರು ಆರ್ಎಸ್ಎಸ್ ಕುರಿತು ಮಾತನಾಡಿ ಅನುಭವಿಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಆರ್ಎಸ್ಎಸ್ ಕುರಿತು ಮಾತು ಬೆಂಕಿಯೊಂದಿಗೆ ಸರಸವಾಡಿದಂತೆ" ಎಂದಿದ್ದಾರೆ.
"ಸಿದ್ದರಾಮಯ್ಯ ಅವರು ಮುಸ್ಲಿಂ ಮತಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕ್ರೈಸ್ತರನ್ನು ಸಂತೃಪ್ತಿಗೊಳಿಸುವ ಸಲುವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ರಾಷ್ಟ್ರೀಯ ವಿಚಾರಗಳ ಕುರಿತು ರಾಜಕಾರಣ ಬೇಡ" ಎಂದು ಹೇಳಿದ್ದಾರೆ.
"ಯುವಕರಿಗೆ ಆರ್ಎಸ್ಎಸ್ ರಾಷ್ಟ್ರೀಯ ವಿಚಾರದ ಬಗ್ಗೆ ತಿಳಿಸುತ್ತಿದೆ. ಆರ್ಎಸ್ಎಸ್ ಕ್ಯಾಂಪ್ಗೆ ಗಾಂಧೀಜಿ ಅವರೇ ಬಂದಿದ್ದರು. ಒಳ್ಳೆಯ ಕಾರ್ಯ ಮಾಡಿದ್ದೀರಿ ಎಂದು ಹೇಳಿದ್ದರು. ಕಾಂಗ್ರೆಸ್ಸಿಗರು ಕೊಲೆಗಡುಕರು, ಬಿಜೆಪಿಗರು ಅಲ್ಲ" ಎಂದಿದ್ದಾರೆ.
"ರಾವಣನಿಗೆ ರಾಮನ ಕುರಿತು ತಿಳಿದಿತ್ತು. ಔರಂಗಜೇಬ್ಗೆ ಶಿವಾಜಿ ಬಗ್ಗೆ ಏನೂ ತಿಳಿದಿರಲಿಲ್ಲ. ಶಿವಾಜಿ ಹುಟ್ಟದೇ ಇರುತ್ತಿದ್ದರೆ ದೇಶದಲ್ಲಿ ಹಿಂದೂಗಳು ಇರುತ್ತಿರಲಿಲ್ಲ. ಆರ್ಎಸ್ಎಸ್ ಇಲ್ಲದೇ ಇರುತ್ತಿದ್ದರೆ, ಈ ದೇಶ ಪಾಕಿಸ್ತಾನವೋ ಅಥವಾ ಇನ್ಯಾವುದೋ ಆಗಿರುತ್ತಿತ್ತು" ಎಂದು ಹೇಳಿದ್ದಾರೆ.