ಗೋವಾ, ಅ.14 (DaijiworldNews/PY): "ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂಜರಿಯುವುದಿಲ್ಲ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಗೋವಾದ ಧರ್ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಗಡಿಯಲ್ಲಿ ಯಾವುದೇ ರೀತಿಯ ದಾಳಿಗಳನ್ನು ನಾವು ಸಹಿಸುವುದಿಲ್ಲ. ನೀವು ಪದೇ ಪದೇ ನಿಯಮ ಉಲ್ಲಂಘನೆ ಮಾಡಿದಲ್ಲಿ ನಾವು ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ" ಎಂದಿದ್ದಾರೆ.
"ಕಾಶ್ಮೀರದಲ್ಲಿ ನಾಗರಿಕ ಹತ್ಯೆಗೆ ಪಾಕಿಸ್ತಾನ ಪ್ರಾಯೋಜಕತ್ವ ವಹಿಸದೇ ಇದ್ದಲ್ಲಿ ಹಾಗೂ ತನ್ನ ಅಕ್ರಮಗಳನ್ನು ನಿಲ್ಲಿಸದಿದ್ದಲ್ಲಿ ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ. ದಾಳಿಗಳನ್ನು ನಾವು ಸಹಿಸುವುದಿಲ್ಲ ಎನ್ನುವುದನ್ನು ಸರ್ಜಿಕಲ್ ಸ್ಟ್ರೈಕ್ ಸಾಬೀತುಪಡಿಸಿದೆ. ನೀವು ನಿಯಮ ಉಲ್ಲಂಘನೆ ಮಾಡಿದಲ್ಲಿ ಇನ್ನಷ್ಟು ದಾಳಿ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಮನೋಹರ್ ಪರಿಕ್ಕರ್ ಅವರು ರಕ್ಷಣಾ ಮಂತ್ರಿಯಾಗಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದ ಗಡಿ ಪ್ರದೇಶಕ್ಕೆ ತೊಂದರೆ ನೀಡುವ ಯಾರನ್ನೂ ಕೂಡಾ ಬಿಡುವುದಿಲ್ಲ ಎನ್ನುವ ಸಂದೇಶವನ್ನು ಕಳುಹಿಸಿದ್ದೇವೆ. ಆ ಸಂದರ್ಭ ಮಾತುಕತೆಗೆ ಸಮಯವಿತ್ತು. ಆದರೆ, ಈಗ ಏನಿದ್ದರೂ ತೆಗೆದುಕೊಂಡಿದನ್ನು ಕೊಡುವುದಷ್ಟೇ ತಿಳಿದಿದೆ" ಎಂದಿದ್ದಾರೆ.