ನವದೆಹಲಿ, ಅ.25 (DaijiworldNews/PY): ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅನಾರೋಗ್ಯ ಪೀಡಿತ ವ್ಯಕ್ತಿಗೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಸಾಂಕ್ರಾಮಿಕದ ಸಂದರ್ಭ ಯೋಗಿ ಆದಿತ್ಯನಾಥ್ ಸರ್ಕಾರ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತ್ತು. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯು ಹದಗೆಟ್ಟ ಸ್ಥಿತಿಯನ್ನು ಎಲ್ಲರೂ ನೋಡಿದ್ದಾರೆ. ಈ ಹಿನ್ನೆಲೆ ಉತ್ತರ ಪ್ರದೇಶ ಕಾಂಗ್ರೆಸ್ ಒಂದು ನಿರ್ಧಾರಕ್ಕೆ ಬಂದಿದ್ದು, ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಯಾವುದೇ ಕಾಯಿಲೆಗೆ 10 ಲಕ್ಷ ರೂ.ವರೆಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಸಿಗಲಿದೆ" ಎಂದು ತಿಳಿಸಿದ್ದಾರೆ.
ಚುನಾವಣೆಯ ಹಿನ್ನೆಲೆ ಕಾಂಗ್ರೆಸ್, 20 ಲಕ್ಷ ಜನರಿಗೆ ಉದ್ಯೋಗ ಸೇರಿದಂತೆ ರೈತರ ಸಾಲ ಮನ್ನಾ, ಪ್ರತಿ ಕ್ವಿಂಟಾಲ್ ಗೋಧಿ ಮತ್ತು ಭತ್ತಕ್ಕೆ 2500 ರೂ., ಕಬ್ಬಿಗೆ ಪ್ರತಿ ಕ್ವಿಂಟಾಲ್ಗೆ 400 ರೂ. ಹಾಗೂ ಶೇ. 50 ವಿದ್ಯುತ್ ಬಿಲ್ ಕಡಿತ ಮಾಡುವುದಾಗಿ ಹೇಳಿದೆ.
"ಕೆಲವು ವರ್ಷಗಳಿಂದ ರೈತರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ಧಾರೆ ಎಂದು ತಿಳಿದಿದೆ. ಹಾಗಾಗಿ ನಾವು ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇವೆ. ಈ ಹಿಂದೆ ಕೂಡಾ ಕಾಂಗ್ರೆಸ್ 72,000 ಕೋಟಿ ರೂ. ಸಾಲ ಮನ್ನಾ ಮಾಡಿದೆ" ಎಂದು ತಿಳಿಸಿದ್ದರು.