ನವದೆಹಲಿ, ಅ.25 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭ ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಅ.30-31ರಂದು ಪ್ರಧಾನಿ ಮೋದಿ ಅವರು ಇಟಲಿಯ ರೋಮ್ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಪೋಪ್ ಭೇಟಿಯ ಹಿನ್ನೆಲೆ ಅ.28ರ ರಾತ್ರಿಯೇ ಭಾರತದಿಂದ ವ್ಯಾಟಿಕನ್ ಸಿಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಅ.29ರಂದು ಪ್ರಧಾನಿ ಮೋದಿ ಅವರು ಪೋಪ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಿ-20 ಶೃಂಗಸಭೆಯ ಬಳಿಕ ಪ್ರಧಾನಿ ಮೋದಿ ಅವರು ನವೆಂಬರ್ 1ರಂದು ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಹವಾಮಾನ ಬಲಾವಣೆ ಕುರಿತ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಯುಕೆ ಪಿಎಂ ಬೋರಿಸ್ ಜಾನ್ಸನ್ ಅವರೊಂದಿಗೆ ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಹವಾಮಾನ ಬದಲಾವಣೆ ಬಗ್ಗೆ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅವರು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಲಿದ್ದಾರೆ. ಈ ವೇಳೆ ಭಾರತವು ಹವಮಾನ ಬದಲಾವಣೆ, ಹಣಕಾಸು, ಕಾರ್ಬನ್ ವ್ಯಾಪಾರ ಕಾರ್ಯವಿಧಾನಗಳ ಕುರಿತು ಮಾತನಾಡಲಿದ್ದಾರೆ.
ಅಫ್ಗಾನಿಸ್ತಾನವನ್ನು ಸ್ಥಿರಗೊಳಿಸುವ ಹಾಗೂ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ತೈವಾನ್ನ ಮೇಲೆ ಚೀನಾದ ಆಕ್ರಮಣಕಾರಿ ನಿಲುವಿನ ಕುರಿತು ಜಿ-20 ಶೃಂಗದಲ್ಲಿ ಚರ್ಚೆಯಾಗಲಿದೆ. ಅಲ್ಲದೇ ಹಲವಾರು ಅಂತರಾಷ್ಟ್ರೀಯ ಸಮಸ್ಯೆಗಳ ಕುರಿತು ಜಿ-20 ಶೃಂಗದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.