ಬೆಂಗಳೂರು, ಅ.25 (DaijiworldNews/PY): "ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ರಾಜಕೀಯ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯ ಅವರಿಗಿಂತ ನಿಷ್ಣಾತರು ಬೇರೆ ಇಲ್ಲ" ಎಂದು ರಾಜ್ಯ ಬಿಜೆಪಿ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ರಾಜಕೀಯ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯ ಅವರಿಗಿಂತ ನಿಷ್ಣಾತರು ಬೇರೆ ಇಲ್ಲ. ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ಹುಡುಕಿದವರು ನೀವಲ್ಲವೇ ಸಿದ್ದರಾಮಯ್ಯ?" ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತೀರಿ ಸಿದ್ದರಾಮಯ್ಯ" ಎಂದಿದೆ.
"ಜಾತಿ ಎಂಬುದು ಈ ದೇಶದಲ್ಲಿ ವಾಸ್ತವ ಎನ್ನುವ ಸಿದ್ದರಾಮಯ್ಯ ಅವರು ಜಾತಿ ರಾಜಕೀಯ ಬಿಟ್ಟು ಬೇರೇನು ಮಾಡಿಲ್ಲ. ನಿಜವಾಗಿಯೂ ಜಾತ್ಯತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಸಿದ್ದರಾಮಯ್ಯನವರೇ, ನಿಮ್ಮಿಂದ ಜಾತಿಯನ್ನು ಉಪಜಾತಿಯಾಗಿ ಒಡೆಯುವುದಕ್ಕೆ ಮಾತ್ರ ಸಾಧ್ಯ" ಎಂದು ಆರೋಪಿಸಿದೆ.
"ತಿಲಕ ಕಂಡರೆ ಭಯ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಹಿಂದೂ ಧರ್ಮದ ಅವಹೇಳನ ಮಾಡಿದರು. ಆಗ ಅವರಿಗೆ ಅಲ್ಪಸಂಖ್ಯಾತರ ಓಲೈಕೆ ಮುಖ್ಯವಾಗಿತ್ತು. ಅದಕ್ಕಾಗಿ ಟಿಪ್ಪು ಜಯಂತಿ ನಡೆಸಿದರು. ಸಿದ್ದರಾಮಯ್ಯನವರೇ, ಇದು ಸಮಾಜ ವಿಭಜನೆಯಲ್ಲವೇ?" ಎಂದು ಪ್ರಶ್ನಿಸಿದೆ.
"ಜಾತಿ, ಕೋಮು ರಾಜಕೀಯವನ್ನು ಮಾಧ್ಯಮ ರಂಗದಲ್ಲಿಯೂ ತುರುಕಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪತ್ರಕರ್ತರಿಗೆ ಮಾತ್ರ ಮಾಧ್ಯಮ ಕಿಟ್ ಒದಗಿಸಲು ಆದೇಶ. ಅಲ್ಪಸಂಖ್ಯಾತರ ಒಡೆತನದ ಪತ್ರಿಕೆಗಳಿಗೆ ಜಾಹಿರಾತು ನೀಡಬೇಕು ಎಂದು ಸುತ್ತೋಲೆ. ಇವೆಲ್ಲ ನಿಮ್ಮ ಸಾಧನೆಯಲ್ವೇ ಸಿದ್ದರಾಮಯ್ಯ?" ಎಂದು ಕೇಳಿದೆ.