ಬೆಂಗಳೂರು, ಅ.25 (DaijiworldNews/PY): "ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ, ದಾಸ್ಯವನ್ನು ಧಿಕ್ಕರಿಸಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರೆ, ಮನುವಾದಿ ಸಿದ್ಧಾಂತದ ಸಂಘಪರಿವಾರ, ಬಿಜೆಪಿಯ ಮೂಲಕ ಗುಲಾಮಗಿರಿಯ ಪುನರಾವರ್ತನೆಯ ಪ್ರಯತ್ನದಲ್ಲಿದೆ" ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ, ದಾಸ್ಯವನ್ನು ಧಿಕ್ಕರಿಸಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರೆ, ಮನುವಾದಿ ಸಿದ್ಧಾಂತದ ಸಂಘಪರಿವಾರ, ಬಿಜೆಪಿಯ ಮೂಲಕ ಗುಲಾಮಗಿರಿಯ ಪುನರಾವರ್ತನೆಯ ಪ್ರಯತ್ನದಲ್ಲಿದೆ. ಆದರೆ ಸ್ತ್ರೀ ಶಕ್ತಿ ಜಾಗೃತಗೊಂಡಿದ್ದು, ಬಿಜೆಪಿಯ ಸರ್ವಾಧಿಕಾರಿ ಪ್ರಭುತ್ವದ ಗುಲಾಮಿ ಕಟ್ಟಳೆಗಳನ್ನು ಮೀರಿ ಮುನ್ನಡೆಯಲಿದೆ" ಎಂದಿದೆ.
"ಜನಪರ ಆಡಳಿತ ನೀಡಿದ್ದರೆ, ಕೋವಿಡ್ ಸಂಕಷ್ಟದಲ್ಲಿ ಜನರಿಗೆ ನೆರವಾಗಿದ್ದರೆ, ರೈತರು, ಕಾರ್ಮಿಕರು, ಸಂತ್ರಸ್ತರಿಗೆ ಪರಿಹಾರ ನೀಡಿದ್ದರೆ, ಬೆಡ್ ಬ್ಲಾಕಿಂಗ್, ಕೊರೊನಾ ಹೆಣದ ಮೇಲೆ ಹಣ ಮಾಡದಿದ್ದರೆ, ಇಡೀ ಮಂತ್ರಿಮಂಡಲವೇ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಬಿಡಾರ ಹೂಡುವ ಪರಿಸ್ಥಿತಿ ಬಿಜೆಪಿಗೆ ಬರುತ್ತಿರಲಿಲ್ಲ" ಎಂದು ತಿಳಿಸಿದೆ.
ಕಾಂಗ್ರೆಸ್ ಅವಧಿಯಲ್ಲಿ ಸಿಲಿಕಾನ್ ಸಿಟಿ ಹಾಗೂ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಬಿಜೆಪಿ ಆಡಳಿತದಲ್ಲಿ 'ಡ್ರಗ್ಸ್ ಸಿಟಿ' ಆಗುತ್ತಿದೆ. ಬಿಜೆಪಿಗೂ ಡ್ರಗ್ಸ್ ಪೆಡ್ಲರ್ಗಳಿಗೂ ಇರುವ ನಂಟೇ ಈ ಹಂತಕ್ಕೆ ಬರಲು ಕಾರಣ. ಅದಾನಿ ಪೋರ್ಟ್ನ ಡ್ರಗ್ಸ್ ಬಗ್ಗೆ ಬಿಜೆಪಿಗರು ಮಾತನಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದೆ.
"ಕಾರ್ಮಿಕರ ವಿಷಯದಲ್ಲಿ ಬಿಜೆಪಿಯ ನಡವಳಿಕೆ ಅತ್ಯಂತ ಕ್ರೂರವಾಗಿದೆ. ಕಾರ್ಮಿಕ ನಿಧಿಯಲ್ಲಿ ಹಗರಣ ನಡೆಸಿದ್ದಲ್ಲದೆ ಗಾರ್ಮೆಂಟ್ಸ್ ಕಾರ್ಮಿಕರ ತುಟ್ಟಿ ಭತ್ಯೆ ನೀಡುವ ಕುರಿತು ಕೋರ್ಟ್ ಅದೇಶವನ್ನೂ ಲೆಕ್ಕಿಸದೆ ತನ್ನ ಕಾರ್ಮಿಕ ವಿರೋಧಿ ಧೋರಣೆ ಮುಂದುವರೆಸಿದೆ. ಉದ್ಯಮಗಳು, ಉದ್ಯೋಗಗಳು ಹಾಗೂ ಉದ್ಯೋಗಿಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸೋತಿದೆ" ಎಂದು ತಿಳಿಸಿದೆ.