ಬೆಂಗಳೂರು, ಅ.25 (DaijiworldNews/PY): "ಬಿಜೆಪಿಯವರು ಹಣದಿಂದ ಮತ ಖರೀದಿ ಮಾಡಲು ಹೊರಟಿದ್ದಾರೆ. ಮತದಾರರು ಅವರ ಗರ್ವವನ್ನು ಮುರಿಯಲಿದ್ದಾರೆ" ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನನಾಡಿದ ಅವರು, "ಕಾಂಗ್ರೆಸ್ ಎರಡು ಉಪಚುನಾಣೆಯಲ್ಲಿಯೂ ಗೆಲ್ಲಲಿದೆ. ನಮಗೆ ಗೆಲುವಿನ ಬಗ್ಗೆ ಸಂಪೂರ್ಣವಾದ ನಂಬಿಕೆ ಇದೆ. ಮಸ್ಕಿಯಲ್ಲಿ ಗೆದ್ದಂತೆ ಇಲ್ಲೂ ಕೂಡಾ ನಾವೇ ಗೆಲ್ಲುತ್ತೇವೆ. ದಲಿತರು, ಅಲ್ಪಸಂಖ್ಯಾತರು, ರೈತರು ನಮ್ಮ ಪರವಾಗಿದ್ದು, ಭ್ರಷ್ಟಾಚಾರದ ವಿರುದ್ದ ನಿಂತಿದ್ದಾರೆ" ಎಂದಿದ್ದಾರೆ.
ಆರ್ಎಸ್ಎಸ್ ಕುರಿತು ಜೆಡಿಎಸ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಪ್ರಪಂಚವೇ ನೋಡುತ್ತಿದೆ. ಈ ವಿಚಾರವಾಗಿ ನಾನೇನು ಹೆಚ್ಚು ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇಂಧನ ದರ ಏರಿಕೆಯಾಗುತ್ತಿದೆ. ಬಿಜೆಪಿಯದ್ದು ಜನರ ವಿರುದ್ದದ ಧೋರಣೆಯಾಗಿದೆ. ಇಡೀ ವಿಶ್ವವೇ ಬಿಜೆಪಿಯ ಷಡ್ಯಂತ್ರವನ್ನು ನೋಡುತ್ತಿದೆ. ಬೆಲೆ ಏರಿಕೆಯ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ" ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.