ಉತ್ತರ ಪ್ರದೇಶ, ಅ.25 (DaijiworldNews/HR): ಉತ್ತರ ಪ್ರದೇಶದ ಸಿದ್ಧಾರ್ಥನಗರ, ಇಟಾಹ್, ಹರ್ಡೋಯ್, ಪ್ರತಾಪಗಡ, ಫತೇಪುರ್, ಡಿಯೋರಿಯಾ, ಗಾಜಿಪುರ, ಮಿರ್ಜಾಪುರ ಮತ್ತು ಜೌನ್ಪುರ ಜಿಲ್ಲೆಗಳಲ್ಲಿ 2,329 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ಮೋದಿಯವರು ಸಿದ್ಧಾರ್ಥನಗರದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, "ಹಿಂದಿನ ಸರ್ಕಾರಗಳು ಪೂರ್ವಾಂಚಲ್ ಪ್ರದೇಶದ ಜನರ ಮೂಲಭೂತ ವೈದ್ಯಕೀಯ ಅಗತ್ಯತೆಗಳನ್ನು ಕಡೆಗಣಿಸಿ ಅವರ ಕುಟುಂಬಗಳ 'ಖಜಾನೆ ತುಂಬು'ವತ್ತ ಗಮನ ಹರಿಸಿದ್ದವು" ಎಂದರು.
2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, "ಅವರ ಭ್ರಷ್ಟಾಚಾರದ ಚಕ್ರ 24 ಗಂಟೆಗಳ ಕಾಲ ನಡೆಯಿತು. ತಮ್ಮ ಸ್ವಂತ ದುಡಿಮೆ ಮತ್ತು ತಮ್ಮ ಕುಟುಂಬದ ಬೊಕ್ಕಸವನ್ನು ತುಂಬುವುದಕ್ಕೆ ಆದ್ಯತೆಯನ್ನು ನೀಡಿದ್ದರು. ಬಡವರಿಗೆ ಮೂಲ ಸೌಕರ್ಯಗಳನ್ನು ವಿಸ್ತರಿಸುವುದು ನಮ್ಮ ಆದ್ಯತೆಯಾಗಿದೆ" ಎಂದಿದ್ದಾರೆ.
ಇನ್ನು "ಈ ಮೊದಲು ಔಷಧಗಳು, ಆಂಬ್ಯುಲೆನ್ಸ್, ನೇಮಕಾತಿಗಳು, ವರ್ಗಾವಣೆ ಮತ್ತು ಪೋಸ್ಟಿಂಗ್ನಲ್ಲಿ ಭ್ರಷ್ಟಾಚಾರವಿತ್ತು. ಈ ಮೂಲಕ ಉತ್ತರ ಪ್ರದೇಶದಲ್ಲಿ ಕೆಲವು 'ಪರಿವಾರ'ಗಳು ಪ್ರವರ್ಧಮಾನಕ್ಕೆ ಬಂದವು" ಎಂದು ಹೇಳಿದ್ದಾರೆ.