ಶ್ರೀನಗರ, ಅ. 25 (DaijiworldNews/SM): ಜಮ್ಮು ಕಾಶ್ಮೀರದ ಮೂರು ದಿನದ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನ ವಿರುದ್ಧ ಗುಡುಗಿದ್ದಾರೆ. ದೇಶದಲ್ಲಿನ ಅತ್ಯಂತ ಪ್ರಮುಖವಾದ ಪ್ರದೇಶವಾಗಿ ಇದನ್ನು ಅಭಿವೃದ್ಧಿಪಡಿಸಲು ಜಮ್ಮು-ಕಾಶ್ಮೀರದ ಯುವಕರೊಂದಿಗೆ ಕೇಂದ್ರ ಸರಕಾರ ಮಾತುಕತೆ ನಡೆಸಲಿದೆ ಎಂದಿದ್ದಾರೆ.

2019 ಆಗಸ್ಟ್ ನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಹಾಗೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಫಾರೂಖ್ ಅಬ್ದುಲ್ಲಾ ಸಲಹೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ವೈದ್ಯಕೀಯ ಅಧ್ಯಯನಕ್ಕಾಗಿ ಕಾಶ್ಮೀರದ ಯುವಕರು ಪಾಕಿಸ್ತಾನಕ್ಕೆ ಹೋಗಬೇಕಾಗಿಲ್ಲ," "ಕೇಂದ್ರಾಡಳಿತ ಪ್ರದೇಶದ ಮೇಲೆ 12,000 ಕೋಟಿ ರೂಪಾಯಿಯ ಹೂಡಿಕೆಯನ್ನು ನಾವು ಈಗಾಗಲೇ ಮಾಡಿದ್ದೇವೆ. ಸ್ಥಳೀಯ ಯುವಕರಿಗೆ ಐದು ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ 2022 ರ ಅಂತ್ಯದ ವೇಳೆಗೆ ಒಟ್ಟು ರೂಪಾಯಿ 51,000 ಕೋಟಿ ಹೂಡಿಕೆಯ ಗುರಿಯನ್ನು ಸರ್ಕಾರ ಹೊಂದಿದೆ ಎಂದಿದ್ದಾರೆ.