ಬೆಂಗಳೂರು, ಅ.26 (DaijiworldNews/HR): ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಈಗ ರಾಜ್ಯದ ಯಾವ ಕ್ಷೇತ್ರದಲ್ಲೂ ನೆಲೆಯಿಲ್ಲ.ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ದತೆ ನಡೆಸಿರುವ ಸಿದ್ದರಾಮಯ್ಯ ಈಗ ಒಂದು ವರ್ಗದ ಓಲೈಕೆಗಾಗಿ ಹಿಂದೂ ಧರ್ಮದ ಅವಹೇಳನಕ್ಕೆ ಮುಂದಾಗಿದ್ದಾರೆ" ಎಂದು ಬಿಜೆಪಿ ಹೇಳಿದೆ.

ಲಿಂಗಾಯತವಿರೋಧಿಸಿದ್ದರಾಮಯ್ಯ ಎಂದು ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, "ಸಿದ್ದರಾಮಯ್ಯ ಅವರೇ, ವೀರಶೈವ - ಲಿಂಗಾಯತ ಸಮುದಾಯದ ಮೇಲೆ ನಿಮಗೇಕೆ ದ್ವೇಷ? ಹಿಂದೆ ಧರ್ಮ ಒಡೆಯಲು ಹೋಗಿ ಆ ಸಮುದಾಯದ ಭಾವನೆ ಕೆರಳಿಸಿದಿರಿ.ಈಗ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ ಎಂದು ಪ್ರಶ್ನಿಸುವ ಮೂಲಕ ಕಾಯಕ ಧರ್ಮವನ್ನು ಅಪಮಾನ ಮಾಡುತ್ತಿದ್ದೀರಿ" ಎಂದಿದೆ.
ಇನ್ನು "ಬೊಮ್ಮಾಯಿ ಜಾತಿಯವರು ಕಂಬಳಿ ನೇಯ್ತಾರಾ? ಕಾಗೇರಿ ಜಾತಿಯವರು ಕುರಿ ಕಾಯ್ತಾರಾ? ಎಂದು ಪ್ರಶ್ನಿಸುವ ಮೂಲಕ ಸಮಾಜವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದೀರಿ ಸಿದ್ದರಾಮಯ್ಯ? ಹಾಲಿನಂಥ ಸಮಾಜದಲ್ಲಿ ಜಾತಿ ಹುಳಿ ಹಿಂಡಿ ಒಡೆಯುವುದೇ ನಿಮ್ಮ ರಾಜಕೀಯ ಧರ್ಮ. ಸಮಾಜ ಒಟ್ಟಾಗಿದ್ದರೆ ಈ ಮಜವಾದಿಗೆ ಸಂಕಟವಾಗುತ್ತದೆ" ಎಂದು ಹೇಳಿದೆ.
ವೀರಶೈವ- ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಅವರು ಎಂದಾದರೂ ಗೌರವ ವ್ಯಕ್ತಪಡಿಸಿದ ಉದಾಹರಣೆ ಇದೆಯೇ? ಧರ್ಮ ವಿಭಜನೆಯ ಪ್ರಯತ್ನ ಮಾಡುವಾಗ "ಲಿಂಗಾಯತ ಸ್ವಾಮೀಜಿಗಳು ನೀಡಿದ ಮನವಿ" ಪ್ರಕಾರ ಪ್ರತ್ಯೇಕ ಧರ್ಮದ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದ್ದೆ ಎಂದು ಜಾರಿಕೊಂಡಿದ್ದು ನೆನಪಿಲ್ಲವೇ?" ಎಂದು ಪ್ರಶ್ನಿಸಿದೆ.