ಹಾಸನ, ಅ.27 (DaijiworldNews/PY): "ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭ ಸರಿಯಾಗಿ ಕೆಲಸಗಳು ಆಗುತ್ತಿರಲಿಲ್ಲ. ಈ ಹಿನ್ನೆಲೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ಸರ್ಕಾರ ಕೆಡವಲು ಇಷ್ಟ ಇತ್ತು" ಎಂದು ಅಬಕಾರಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸರಿಯಾದ ಕೆಲಸ ಆಗುತ್ತಿರಲಿಲ್ಲ. ಹಾಗಾಗಿ ನೀವು ಬಿಜೆಪಿಗೆ ಹೋಗಿ ಎಂದು ಹೇಳಿದ್ದೇ ಜಮೀರ್. ಅಭಿವೃದ್ದಿಯ ಸಲುವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿ ನನ್ನನ್ನು ಬಿಜೆಪಿ ಹೋಗುವಂತೆ ಹೇಳಿದರು" ಎಂದಿದ್ದಾರೆ.
"ಯಾವುದೇ ವಿಚಾರ ಇದ್ದರೂ ಕೂಡಾ ರಾಜಕೀಯ ನಾಯಕರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರ ಉಪಚುನಾವಣೆಗೆ ಸಂಬಂಧಪಟ್ಟಂತೆ ನಾಯಕರು ಆರೋಪ ಹಾಗೂ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈ ಎಲ್ಲಾ ವಿಚಾರದ ಬಗ್ಗೆ ರಾಜ್ಯದ ಜನ ಗಮನಿಸುತ್ತಿರುತ್ತಾರೆ. ಈ ಕುರಿತು ಜಮೀರ್ ಅವರು ಪದ ಬಳಕೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಬಿಜೆಪಿ ಸರ್ಕಾರದಲ್ಲಿ ನನಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಲಾಗಿದೆ. ಪಕ್ಷ ಮುಂದೆಯೂ ಕೂಡಾ ಟಿಕೇಟ್ ನೀಡಲಿದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಬೇರೆ ಪಕ್ಷಕ್ಕೆ ಹೋಗಿ ಏನು ಮಾಡಲಿ?. ಉಪಚುನಾವಣೆಯ ಬಳಿಕ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸಲಿದೆ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿ ಇಲ್ಲ" ಎಂದಿದ್ದಾರೆ.