ಬೆಂಗಳೂರು, ಅ 27(DaijiworldNews/MS): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಕರ ಮಧ್ಯೆ ಕಚ್ಚಾಟ ನಡೆಯುತ್ತಿರುವುದು ಎಐಸಿಸಿ ಸ್ವ ಘೋಷಿತ ಅಧ್ಯಕ್ಷೆಯ ಆತಂಕಕ್ಕೆ ಕಾರಣವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, " ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಕರ ಮಧ್ಯೆ ಕಚ್ಚಾಟ ನಡೆಯುತ್ತಿರುವುದು ಎಐಸಿಸಿ ಸ್ವ ಘೋಷಿತ ಅಧ್ಯಕ್ಷೆಯ ಆತಂಕಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಬುದ್ಧಿ ಹೇಳಿದ ಬಳಿಕವೂ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮೇರೆಮೀರಿದೆ"
ಎಂದು ಕುಹಕವಾಡಿದೆ.
"ಪಕ್ಷದ ನೀತಿ ನಿರೂಪಣೆ ವಿಚಾರದಲ್ಲಿ ಅಸ್ಪಷ್ಟತೆ. ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ. ಕಾರ್ಯಕರ್ತರಿಗೆ ತಲುಪದ ವಿಷಯ. ಇಷ್ಟೊಂದು ಗೊಂದಲವಿಟ್ಟುಕೊಂಡು ಪಕ್ಷ ಕಟ್ಟುವುದು ಹೇಗೆಂಬುದು ಸೋನಿಯಾ ಗಾಂಧಿ ಅವರ ಆತಂಕವಾಗಿದೆ. ಜನರಿಂದ ಆಯ್ಕೆಯಾದವರನ್ನು ಕುಟುಂಬದ ಪರಿಚಾರಿಕೆಗೆ ಬಳಸಿಕೊಂಡರೆ ಪಕ್ಷ ಉಳಿಯುತ್ತದೆಯೇ?" ಎಂಬುದಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಿಸಿದೆ
"ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಎಐಸಿಸಿಯ ಸ್ವಘೋಷಿತ ಅಧ್ಯಕ್ಷೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಂಚಭಾಗವಾಗಿ ಒಡೆದು ಹೋಗುವುದೇ ಎಂಬ ಆತಂಕ ನಕಲಿ ಗಾಂಧಿ ಕುಟುಂಬವನ್ನು ಕಾಡುತ್ತಿದೆ. ಇದು ಕಾಂಗ್ರೆಸ್ ಮುಕ್ತ ಭಾರತದತ್ತ ಮತ್ತೊಂದು ಹೆಜ್ಜೆಯೇ?" ಎಂದು ಪ್ರಶ್ನಿಸಿದೆ.
"ಕಾಂಗ್ರೆಸ್ ವೈಚಾರಿಕತೆ ಎಂದರೆ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ. ಇದರಿಂದ ಹೊರತಾದ ಚಿಂತನೆಗೆ ಅಲ್ಲಿ ಜಾಗವಿಲ್ಲ. ಚುನಾಯಿತ ಪ್ರತಿನಿಧಿಗಳ ಯೋಚನಾ ಲಹರಿಯನ್ನೇ ಕಾಂಗ್ರೆಸ್ ಹಾಳುಮಾಡಿದೆ. ದಿಕ್ಕು ಕಾಣದ ಕಾಂಗ್ರೆಸ್, ದಿಕ್ಕೆಟ್ಟು ಹೋಗಿದೆ" ಎಂದು ಹೇಳಿದೆ