ಬೆಂಗಳೂರು, ಅ.27 (DaijiworldNews/PY): ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಈ ನಡುವೆ ನಾಯಕರ ಆರೋಪ ಪ್ರತ್ಯಾರೋಪ ಜೋರಾಗಿಯೇ ನಡೆಯುತ್ತಿದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿ ಟಿ ರವಿ, "ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ. ದಾಸಶ್ರೇಷ್ಠ ಕನಕದಾಸರ ಈ ಮಾತುಗಳನ್ನು ಎಂದೋ ಮರೆತುಬಿಟ್ಟು ಕುಲಗಳನ್ನು ಒಡೆದು, ಸಮಾಜವನ್ನು ಅಸ್ಥಿರಗೊಳಿಸಿ,ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ರಾಜಕೀಯ ಎಂದು ಭಾವಿಸಿದ್ದು ದುರಂತ" ಎಂದಿದ್ದಾರೆ.
"ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ. ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?" ಎಂದು ಪ್ರಶ್ನಿಸಿದ್ದಾರೆ.
ಸಿಂದಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಬೇಕು. ಎಂದಾದರೂ ನೀವು ಕುರಿ ಕಾದಿದ್ದೀರಾ?" ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ದ ವಾಗ್ದಾಳಿ ನಡೆಸಿದ್ದರು.