ಬಾಗಲಕೋಟೆ, ಅ.27 (DaijiworldNews/PY): ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದು ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ನಾನು ಟೋಪಿ ಹಾಕಿಕೊಳ್ಳುವುದನ್ನು ಕೇಳೋಕೆ ಅವನ್ಯಾರು?" ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಗಾಂಧಿ ಟೋಪಿಯನ್ನು ಹಾಕಿಕೊಳ್ಳುವೆ, ಕುರುಬರ ಟೋಪಿಯನ್ನು ಹಾಕಿಕೊಳ್ಳುವೆ ಅಥವಾ ಕ್ರಿಶ್ಚಿಯನ್ನರ ಟೋಪಿಯನ್ನು ಹಾಕಿಕೊಳ್ಳುವೆ. ನಾನು ಟೋಪಿ ಹಾಕಿಕೊಳ್ಳುವುದನ್ನು ಕೇಳುವುದಕ್ಕೆ ಅವನ್ಯಾರು?" ಎಂದು ಏಕ ವಚನದಲ್ಲಿ ಸಿ ಟಿ ರವಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ಕಂಬಳಿಯನ್ನು ನೆಯ್ಯೋದು ಕುರುಬರು. ಇದು ಅವರ ಕಸುಬು ಕೂಡಾ ಆಗಿದೆ. ಕಂಬಳಿಯನ್ನು ನಾವು ಹಾಕಿಕೊಂಡಿದ್ದೇವೆ. ನೇಯ್ದಿದ್ದೇವೆ. ರಾಜಕೀಯ ವಾಕ್ಸಮರದಲ್ಲಿ ಕಂಬಳಿಯನ್ನು ಎಳೆದು ತಂದಿದ್ದು ದುರದೃಷ್ಟಕರ. ಮುಖ್ಯಮಂತ್ರಿಗಳು ಕುರಿ ಕಾದಿದ್ದಾರಾ?. ಕಂಬಳಿ ಹೊದ್ದಿದ್ದಾರಾ ಕೇಳಿ?" ಎಂದು ಪ್ರಶ್ನಿಸಿದ್ದಾರೆ.
"ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ. ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?" ಎಂದು ಸಿ ಟಿ ರವಿ ಪ್ರಶ್ನಿಸಿದ್ದರು.