ಬಾಗಲಕೋಟೆ, ಅ 27(DaijiworldNews/MS): " ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲು ಸಿದ್ಧರಾಮಯ್ಯ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಮತ್ತೊಂದೆಡೆ ಸಿದ್ಧರಾಮಯ್ಯ ಮತ್ತೆ ಸಿಎಂ ಆಗೋದಕ್ಕೆ ಡಿಕೆ ಶಿವಕುಮಾರ್ ಕೂಡ ಬಿಡೋದಿಲ್ಲ. ಇಬ್ಬರೂ ಕೂಡಾ ಸಿಎಂ ಸೀಟ್ ಗೆ ಟವಲ್ ಹಾಕಿ ಕುಳಿತಿದ್ದಾರೆ. ಇನ್ನೊಂದೆಡೆ ಇಂದಿರಾ ಗಾಂಧಿ, ರಾಜೀವ್ ಗಾಂಧಿಗೆ ಏಕವಚನದಲ್ಲಿ ಬಯ್ಯುತ್ತಿದ್ದ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಕಾಲಿಗೆ ಬೀಳುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಲೇವಡಿ ಮಾಡಿದ್ದಾರೆ.

ಇಂದು ಉಪ ಚುನಾವಣೆಯ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದಂತ ಅವರು , ಈ ಹಿಂದೆ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುವಾಗ ಸಿದ್ದರಾಮಯ್ಯ ಇಂದಿರಾ ಗಾಂಧಿ, ರಾಜೀವ್ ಗಾಂಧಿಗೆ ಏಕವಚನದಲ್ಲಿ ನಿಂದಿಸುತ್ತಿದ್ದರು. ಇದಕ್ಕೆ ಬೇಕಾದ ಅಗತ್ಯ ದಾಖಲೆ ನಮ್ಮ ಪಕ್ಷದಲ್ಲಿ ಇದೆ. ಆದರೆ ಇದೀಗ ಅಧಿಕಾರದ ಆಸೆಯಿಂದ ಸೋನಿಯಾ ಗಾಂಧಿ ಕಾಲಿಗೆ ಬೀಳುತ್ತಿದ್ದಾರೆ" ಎಂದು ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿಯ ಬಿ ಟೀಂ ಜೆಡಿಎಸ್ ಎಂಬ ಸಿದ್ದರಾಮಯ್ಯ ಆರೋಪಕ್ಕೆ, ಕುಮಾರಸ್ವಾಮಿ ಅವರನ್ನು ಯಾರು ಸ್ವಾಮಿ ಮುಖ್ಯಮಂತ್ರಿಯನ್ನಾಗಿಸಿದ್ದು, ಯಾರು ಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು' ಎಂದು ಮರು ಪ್ರಶ್ನಿಸಿದರು.
ಕಾಂಗ್ರೆಸ್ ಇರೋರೆಲ್ಲ ಈ ಮೊದಲು ಜೆಡಿಎಸ್ ಪಕ್ಷದಲ್ಲಿ ಇದ್ದವರು. ಈಗ ಆಚೆ ಈಚೆ ಹೋಗಿರುತ್ತಾರೆ. ಸಿದ್ರಾಮಣ್ಣ ಕೂಡ ಜೆಡಿಎಸ್ ನಿಂದ ಬಂದವರು. ಇವತ್ತು ಜೆಡಿಎಸ್ ಬಯ್ಯುತ್ತಾರೆ. ಯಾವುದರಲ್ಲಿ ಲೀಡರ್ ಆಗ್ತಾರೆ ಅದನ್ನ ತುಳಿತಾರೆ ಎಂದು ಕುಹಕವಾಡಿದರು.