ಪಂಜಾಬ್, 27(DaijiworldNews/MS): ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಸ ಪಕ್ಷದ ಸ್ಥಾಪಿಸಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ , " ಪ್ರಸ್ತುತ ನಮ್ಮ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ನಮ್ಮ ವಕೀಲರು ಚುನಾವಣಾ ಆಯೋಗದಿಂದ ಪಕ್ಷದ ಹೆಸರಿಗೆ ಅಂಗೀಕಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರತ್ಯೇಕವಾದ ಚಿಹ್ನೆ ನೀಡಲು ಆಯೋಗಕ್ಕೆ ಮನವಿ ಮಾಡಲಾಗಿದೆ. ಅದು ದೊರೆತ ಬಳಿಕ ಅಧಿಕೃತವಾಗಿ ಪಕ್ಷವನ್ನು ಉದ್ಘಾಟಿಸಲಾಗುವುದು. ನಮ್ಮ ಪಕ್ಷವನ್ನು ಪ್ರಾರಂಭಿಸಿದ ನಂತರ, ನಾವು ಎಲ್ಲಾ 117 ಸ್ಥಾನಗಳಲ್ಲಿ ಹೋರಾಡುತ್ತೇವೆ; ಅದು ಹೊಂದಾಣಿಕೆಯ ಸ್ಥಾನಗಳಾಗಲಿ ಅಥವಾ ನಮ್ಮದೇ ಆಗಿರಲಿ... ಅದನ್ನು ಸಮಯ ನಿರ್ಧರಿಸುತ್ತದೆ ಎಂದು ಹೇಳಿದರು.
" ಸಿದ್ದು ಸೇರಿದಾಗಿನಿಂದ ಕಾಂಗ್ರೆಸ್ ಜನಪ್ರಿಯತೆ ಕುಸಿದಿದೆ. ನವಜೋತ್ ಸಿಂಗ್ ಸಿಧು ಅವರು ಎಲ್ಲಿಂದ ಸ್ಪರ್ಧಿಸಿದರೂ ನಾವು ಅವರ ವಿರುದ್ಧ ಹೋರಾಡುತ್ತೇವೆ ಎಂದು ಅವರು ಹೇಳಿದರು
ಕಳೆದ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ನಾಯಕತ್ವದ ವಿರುದ್ಧ ಆಕ್ರೋಶಗೊಂಡಿರುವ ಅಮರಿಂದರ್ ಸಿಂಗ್ ಕೇಂದ್ರ ಗೃಹ ಸಚಿವರ ಅಮಿತ್ ಶಾರನ್ನು ದೆಹಲಿಯಲ್ಲಿ ಮೂರು ಬಾರಿ ಭೇಟಿ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಕ್ಷೇತ್ರಗಳ ಹಂಚಿಕೆ ವಿಷಯವಾಗಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಎರಡು ಅವಧಿಯಿಂದ ಸುಮಾರು 9.5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅಮರಿಂದರ್ ಸಿಂಗ್, ಹೊಸ ಪಕ್ಷ ಘೋಷಣೆ ಮಾಡಿದ ಸಂದರ್ಭದಲ್ಲೂ ಕಾಂಗ್ರೆಸ್ ಸದಸ್ಯರಾಗಿದ್ದರು. ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು 52 ವರ್ಷ ಕಾಂಗ್ರೆಸ್ನಲ್ಲಿದ್ದೇನೆ. ಹೆಚ್ಚುವರಿಯಾಗಿ ಇನ್ನೂ 10 ದಿನಗಳ ಕಾಲ ಪಕ್ಷದಲ್ಲಿದ್ದರೆ ಏನು ಪರಿಣಾಮವಾಗುತ್ತದೆ ಎಂದು ಪ್ರಶ್ನಿಸಿದರು. ತಮ್ಮೊಂದಿಗೆ ಬರಲು ಬಹಳಷ್ಟು ನಾಯಕರು ಸಿದ್ಧರಿದ್ದಾರೆ. ಹೊಸ ಪಕ್ಷ ಉದ್ಘಾಟನೆಯಾದ ಬಳಿಕ ಯಾರೆಲ್ಲಾ ಬರುತ್ತಾರೆ ಎಂದು ನಿಮಗೆ ತಿಳಿದುಬರಲಿದೆ ಎಂದು ಹೇಳಿದರು.