ಮುಂಬೈ, ಅ 27(DaijiworldNews/MS): ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಜೈಲಿನಿಂದ ಬಿಡುಗಡೆ ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತನಿಖೆ ನಡೆಸಲು ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಅವರ ನೇತೃತ್ವದಲ್ಲಿ ಎನ್ಸಿಬಿಯ ಐದು ಸದಸ್ಯರ ತಂಡವು ದೆಹಲಿಯಿಂದ ಮುಂಬೈಗೆ ಬಂದಿಳಿದಿದೆ.

ಸಮೀರ್ ವಾಂಖೆಡೆ ವಿರುದ್ಧ ಕೇಳಿಬರುತ್ತಿರುವ ಎಲ್ಲಾ ಆರೋಪಗಳ ಬಗ್ಗೆ ಜ್ಞಾನೇಶ್ವರ್ ಸಿಂಗ್ ತನಿಖೆ ನಡೆಸಲಿದ್ದಾರೆ. ಎನ್ಸಿಬಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಜ್ಞಾನೇಶ್ವರ್ ಸಿಂಗ್, ಪ್ರತಿಕ್ರಿಯಿಸಿ "ನಾನು ಆರೋಪಗಳ (ಸಮೀರ್ ವಾಂಖೆಡೆ ವಿರುದ್ಧ) ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ. ವಾಂಖೆಡೆ ಹುದ್ದೆಯಲ್ಲಿ ಉಳಿಯುತ್ತಾರೆಯೇ ಎಂಬ ಪ್ರಶ್ನೆಗೆ, "ಕಾಮೆಂಟ್ ಮಾಡಲು ಇದು ಅಕಾಲಿಕವಾಗಿದೆ. ನಾವು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ" ಎಂದು ಸಿಂಗ್ ಹೇಳಿದರು.
ಮುಂಬೈ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಕಿರಣ್ ಗೋಸಾವಿಯ ಖಾಸಗಿ ಬಾಡಿಗಾರ್ಡ್ ಆಗಿರುವ ಪ್ರಭಾಕರ್ ಸೈಲ್ ಅವರು ವಾಂಖೆಡೆ, ಗೋಸಾವಿ ಮತ್ತು ಇತರ ಕೆಲವು ಎನ್ ಸಿಬಿ ಅಧಿಕಾರಿಗಳು ಹಣದ ಬೇಡಿಕೆಯಿಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ. ಆದರೆ ವಾಂಖೆಡೆ ವಿರುದ್ಧ ಯಾವ ರೀತಿ ದೂರನ್ನು ಪಡೆಯಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿಲ್ಲ.