ಹುಬ್ಬಳ್ಳಿ, ಅ.27 (DaijiworldNews/PY): "ಅಭಿವೃದ್ಧಿ ಕುರಿತು ನಾನು ಚರ್ಚಿಸುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲೆಸೆದಿದ್ದೆ. ಆದರೆ, ಅವರು ವಿಧಾನಸಭೆಯಲ್ಲಿ ಚರ್ಚಿಸೋಣ ಎಂದಿದ್ದರು. ಅವರು ಹೇಳಿದ್ದು ಸತ್ಯ ಎನ್ನುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡುವುದಕ್ಕೆ ಭಯ ಏಕೆ?" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎರಡು ಕ್ಷೇತ್ರದಲ್ಲೂ ಕೂಡಾ ಕಾಂಗ್ರೆಸ್ ಪರ ಅಲೆ ಇದೆ. ಬಿಜೆಪಿಯರು ಯಾವುದೆ ರೀತಿಯಾದ ಅಭಿವೃದ್ಧಿ ಮಾಡಿಲ್ಲ. ಚುನಾವಣೆಗೋಸ್ಕರ ಮನೆ ಕೊಟ್ಟಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಆದೇಶ ಮಾಡಿಕೊಂಡು ಬಂದಿದ್ದಾರೆ" ಎಂದಿದ್ದಾರೆ.
"ದುಡ್ಡು ಹಂಚುವುದೇ ಬಿಜೆಪಿಗರ ಕೆಲಸ. 10-12 ಸಚಿವರು ಒಂದೊಂದು ಕ್ಷೇತ್ರದಲ್ಲಿ ಸೂಟ್ಕೇಸ್ಗಳಲ್ಲಿ ಹಣ ತುಂಬಿಕೊಂಡು ಬಂದು ಠಿಕಾಣಿ ಹೂಡಿದ್ದಾರೆ. ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡುತ್ತೇವೆ" ಎಂದು ತಿಳಿಸಿದ್ದಾರೆ.
ಸಿ ಟಿ ರವಿ ಟ್ವೀಟ್ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿ ಟಿ ರವಿ ಯಾರು ಅವ?. ಯಾರ್ಯಾರ ಬಗ್ಗೆ ಪ್ರಶ್ನೆ ಕೇಳುತ್ತೀರಿ" ಎಂದು ಹೇಳಿದ್ದಾರೆ.
ಸ್ವಾಮೀಜಿಗಳ ಬಗ್ಗೆ ಮಾತನಾಡಿದ್ದಾಗಿ ಬಿಜೆಪಿ ಟ್ವೀಟ್ ಮಾಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಬಿಜೆಪಿಯವರಿಗೆ ಸುಳ್ಳು ಟ್ವೀಟ್ ಮಾಡುವುದೇ ಕಸುಬಾಗಿದೆ. ಸ್ವಾಮಿಗಳ ಬಗ್ಗೆ ನಾನು ಮಾತನಾಡುವುದೇ ಇಲ್ಲ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಗಳ ಪರವಾಗಿದೆ. ಆದರೆ, ಅನ್ನಭಾಗ್ಯ ಯೋಜನೆ ಬಗ್ಗೆ ಕೇಂದ್ರದ ಅನುದಾನ ಹೆಚ್ಚಿದೆ ಎಂದು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಪೆದ್ದರ ರೀತಿ ಮಾತನಾಡುತ್ತಾರೆ" ಎಂದಿದ್ದಾರೆ.