ಬೆಂಗಳೂರು, ಅ.27 (DaijiworldNews/PY): "ಸಾಗಾಟ, ಪ್ರಯಾಣ, ಅಗತ್ಯ ವಸ್ತುಗಳೆಲ್ಲವೂ ಜನತೆ ಬದುಕಲಾಗದಷ್ಟು ದುಬಾರಿಯಾದರೂ ಬಿಜೆಪಿ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಿದೆ" ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರದ ತೆರಿಗೆ 'ದಾಳಿ' ಎಲ್ಲೆಲ್ಲೂ ಬೆಲೆ ಏರಿಕೆಯ 'ಹಾವಳಿ' ಜನರ ಬದುಕು 'ದಿವಾಳಿ' ಬೆಳಕಾಗದ 'ದುಬಾರಿ ದೀಪಾವಳಿ'! ಸಾಗಾಟ, ಪ್ರಯಾಣ, ಅಗತ್ಯ ವಸ್ತುಗಳೆಲ್ಲವೂ ಜನತೆ ಬದುಕಲಾಗದಷ್ಟು ದುಬಾರಿಯಾದರೂ ಬಿಜೆಪಿ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಿದೆ, ಬಿಜೆಪಿ ನಾಯಕರ ಬಂಡತನದ ಸಮರ್ಥನೆ ನೋಡಿದರೆ ಇನ್ನಷ್ಟು ಮಾರಕ ದಿನಗಳು ಬರುವುದು ನಿಶ್ಚಿತ ಎಂದು ಹೇಳಿದೆ.
"ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ನಡುವಿನ ಸಮನ್ವಯದ ಕೊರತೆ ಸಾರ್ವಜನಿಕರ ಪ್ರಾಣಕ್ಕೇ ಕುತ್ತು ತರುತ್ತಿದೆ. ಬೆಂಗಳೂರಿನ ರಸ್ತೆಗಳ ಅಪಾಯಕಾರಿ ಗುಂಡಿಗಳನ್ನು ಮುಚ್ಚುವುದು ಯಾರ ಜವಾಬ್ದಾರಿ ಎಂಬ ಬಗ್ಗೆ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.