ಗಾಜಿಯಾಬಾದ್, ನ.01 (DaijiworldNews/PY): "ನವೆಂಬರ್ 26ರೊಳಗೆ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದಲ್ಲಿ, ದೆಹಲಿಯಾದ್ಯಂತ ಪ್ರತಿಭಟನೆ ತೀವ್ರಗೊಳ್ಳಲಿದೆ" ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನವೆಂಬರ್ 26ರವರೆಗೆ ಕೇಂದ್ರ ಸರ್ಕಾರಕ್ಕೆ ಸಮಯವಿದೆ. ಬಳಿಕ ನವೆಂಬರ್ 27ರಿಂದ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್ಗಳ ಮೂಲಕ ದೆಹಲಿಯ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಚಳವಳಿಯ ಸ್ಥಳವನ್ನು ತಲುಪಲಿದ್ದಾರೆ. ಪ್ರತಿಭಟನೆಯ ಸ್ಥಳದಲ್ಲಿ ಟೆಂಟ್ಗಳನ್ನು ಹಾಕಿ ಭದ್ರ ಕೋಟೆಯನ್ನು ನಿರ್ಮಿಸಲಿದ್ದಾರೆ" ಎಂದಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ದೆಹಲಿಯ ಗಡಿ ಭಾಗಗಳಾದ ಟೆಕ್ರಿ, ಗಾಜಿಪುರ ಹಾಗೂ ಸಿಂಘುವಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ಪ್ರಾರಂಭಿಸಿ ನವೆಂಬರ್ 26ಕ್ಕೆ ಒಂದು ವರ್ಷವಾಗಲಿದೆ.