ವಿಜಯನಗರ, ನ.03 (DaijiworldNews/PY): "ಬೇರೆ ಪಕ್ಷದ ಪ್ರಧಾನಿಯಾಗಿದ್ದರೂ ಕೂಡಾ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತಿರಲಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷದವರು ಇದ್ದಿದ್ದರೂ ಕೂಡಾ ತೈಲ ಬೆಲೆ ಹೆಚ್ಚುತ್ತಿರುತ್ತಿತ್ತು" ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ಬೇಸತ್ತ ಜನರು ಬಿಜೆಪಿಗೆ ಓಟ್ ಹಾಕಿಲ್ಲ ಹಾಗಾಗಿ ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ ಎಂದಾದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಏಕೆ ಸಿಂದಗಿಯಲ್ಲಿ ಗೆದ್ದಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರಿಂದ ತೈಲಬೆಲೆ ಏರಿಕೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ದರ ಏರಿಳಿತದಿಂದ ತೈಲಬೆಲೆ ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಅವರು ಪೂಜಾ-ಪುನಸ್ಕಾರದಲ್ಲಿ ತೊಡಗಿದ್ದು, ಬೆಲೆ ಇಳಿಕೆ ಬಗ್ಗೆ ಗಮನಹರಿಸುತ್ತಿಲ್ಲ ಎನ್ನುವ ಆರೋಪ ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.