ಬೆಂಗಳೂರು, ನ.10 (DaijiworldNews/PY): "ನಾನು ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಕೇಳಲೆಂದು ದೆಹಲಿಗೆ ಹೋಗುತ್ತಿಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ಧಾರೆ.

ಆರ್ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಭೇಟಿಗೆ ಕಾಲಾವಕಾಶ ಕೇಳಿದ್ದೇನೆ. ಇಂದು ಸಂಜೆ ಭೇಟಿಯಾಗುವ ಸಾಧ್ಯತೆ ಇದೆ. ಮಾತುಕತೆಯ ಸಂದರ್ಭ ಯಾವ ವಿಚಾರ, ಏನು ವಿಚಾರ ಪ್ರಸ್ತಾಪ ಆಗುತ್ತದೋ ತಿಳಿದಿಲ್ಲ" ಎಂದಿದ್ದಾರೆ.
"ಕೇಂದ್ರದ ಹಲವು ಸಚಿವರ ಭೇಟಿಐಆಗಿ ಹಲವು ಯೋಜನೆಗಳ ಕುರಿತು ಚರ್ಚಿಸುವೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಕೂಡಾ ಕಾಲಾವಕಾಶ ಕೋರಿದ್ದು, ನಾಳೆ ಸಿಗುವ ಸಾಧ್ಯತೆ ಇದೆ. ವರಿಷ್ಠರೊಂದಿಗೆ ಮಾತುಕತೆ ನಡೆಸಿ ಗುರುವಾರ ಸಂಜೆ ವಾಪಸ್ಸಾಗಲಿದ್ದೇನೆ" ಎಂದು ಹೇಳಿದ್ದಾರೆ.
"ದೆಹಲಿ ಪ್ರವಾಸ ವೇಳೆ ಕಾನೂನು ತಜ್ಞರ ತಂಡದ ಸಭೆ ನಡೆಸಿ, ಕೃಷ್ಣಾ-ಕಾವೇರಿ ಹಾಗೂ ಮತ್ತಿತರ ಅಂತರಾಜ್ಯ ಜಲ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳ ಪ್ರಗತಿ ಪರಾಮರ್ಶಿಸಲು ನಿರ್ಧರಿಸಿದ್ಧೇನೆ" ಎಂದಿದ್ದಾರೆ.