ಬೆಂಗಳೂರು, ನ.22 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, "ಸರ್ಕಾರಕ್ಕೆ ಕರ್ತವ್ಯದ ಪಾಠ ಮಾಡುವ ಸಿದ್ದರಾಮಯ್ಯ, ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಿದ್ದರು" ಎಂದಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಮಾನ್ಯ ಸಿದ್ದರಾಮಯ್ಯ ಅವರೇ, ಬಾದಾಮಿ ಮತ ಕ್ಷೇತ್ರ ನೀರಲ್ಲಿ ಮುಳುಗಿದಾಗ ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರಕ್ಕೆ ಭೇಟಿ ನೀಡಲು ಕಣ್ಣು ನೋವಿನ ಅಡ್ಡಿ ಹೇಳಿದ್ದು ಮರೆತು ಹೋಯಿತೇ?" ಎಂದು ಕೇಳಿದೆ.
"ಸರ್ಕಾರಕ್ಕೆ ಕರ್ತವ್ಯದ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯ ಅವರು ಮಾಡಿದ್ದೇನು? ನೆರೆ ಪೀಡಿತವಾಗಿದ್ದ ಬಾದಾಮಿ ಮತಕ್ಷೇತ್ರಕ್ಕೆ ತೆರಳಲು ಕಣ್ಣು ನೋವಿನ ಕಾರಣ ಹೇಳಿದ್ದ ಸಿದ್ದರಾಮಯ್ಯ, ಅದೇ ವೇಳೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಎದುರು ಕೈಕಟ್ಟಿ ಕುಳಿತುಕೊಂಡಿದ್ದರು. ಆಗ ಎಲ್ಲಿ ಹೋಗಿತ್ತು ನಿಮ್ಮ ಕರ್ತವ್ಯ ನಿಷ್ಠೆ?" ಎಂದು ಪ್ರಶ್ನಿಸಿದೆ.
"ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ, ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ಬಿಜೆಪಿ ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ" ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
"ಅರ್ಧ ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸಿಹೋಗಿದೆ. ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಜನಸ್ವರಾಜ್ ಅಲ್ಲ, ಇದು ಜನಬರ್ಬಾದ್ ಯಾತ್ರೆ" ಎಂದು ಟೀಕಿಸಿದ್ದರು.
"ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ,ರಾಗಿ,ಜೋಳ, ತರಕಾರಿ,ಬಾಳೆ,ತೆಂಗು ಎಲ್ಲವೂ ನಾಶವಾಗಿದೆ. ರೈತರು ಕಣ್ಣೀರಿನಿಂದ ಕೈತೊಳೆದುಕೊಳ್ಳುತ್ತಿದ್ದಾನೆ. ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ.ಇಲ್ಲೊಂದು ಸರ್ಕಾರ ಇದೆಯೇ?" ಎಂದು ಪ್ರಶ್ನಿಸಿದ್ದರು.