ಮುಂಬೈ, ನ.25 (DaijiworldNews/PY): ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಖ್ಖ್ ಸಮುದಾಯ ವಿರುದ್ದ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದತೆಯ ಮೇಲಿನ ಸಮಿತಿ ಸಮನ್ಸ್ ಜಾರಿ ಮಾಡಿದೆ.

ಎಎಪಿ ಶಾಸಕ ರಾಘವ್ ಚಡ್ಡಾ ಅವರ ನೇತೃತ್ವದ ಶಾಂತಿ ಹಾಗೂ ಸೌಹಾರ್ದತೆಯ ಮೇಲಿನ ಸಮಿತಿ ಕಂಗನಾ ರಣಾವತ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಡಿ.6ರೊಳಗೆ ಉತ್ತರಿಸುವಂತೆ ಕಂಗನಾ ಅವರಿಗೆ ತಿಳಿಸಲಾಗಿದೆ.
ಸಿಖ್ಖ್ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದ ಕಂಗನಾ, "ಸಿಖ್ಖ್ ಸಾಮೂಹಿಕ ಹತ್ಯೆ ಹಾಗೂ ನರಮೇಧವು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ವ್ಯಾವಹಾರಿಕ ಹಾಗೂ ಯೋಜಿತ ನಡೆಯಾಗಿತ್ತು. ಸಿಖ್ಖ್ ಸಮುದಾಯದವರು ಇಂದಿರಾಗಾಂಧಿ ಅವರ ಶೂ ಕೆಳಗೆ ನಲುಗಿದ್ದರು" ಎಂದಿದ್ದರು.
ದೆಹಲಿಯ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿಯು ಸಹ ಕಂಗನಾ ರಣಾವತ್ ವಿರುದ್ದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ಐಆರ್ ದಾಖಲಿಸುವಂತೆ ಕಳೆದ ವಾರ ಮನವಿ ಮಾಡಿತ್ತು.
ಇನ್ನು ಕಂಗನಾ ವಿರುದ್ದ ಶಿರೋಮಣಿ ಅಕಾಳಿದಳದ ನಾಯಕ ಹಾಗೂ ಡಿಎಸ್ಜಿಎಂಸಿ ಅಧ್ಯಕ್ಷ ಮನ್ಜಿಂದರ್ ಸಿಂಗ್ ಸಿರ್ಸಾ ನೇತೃತ್ವದ ನಿಯೋಗ ಕೂಡಾ ದೂರು ಸಲ್ಲಿಸಿತ್ತು.